ಮಂಗಳೂರು ; ಕ್ರಿಸ್ಮಸ್ ಹಬ್ಬದ ಈ ಪವಿತ್ರ ಸಂದರ್ಭದಲ್ಲಿ, ಯೇಸು ಕ್ರಿಸ್ತರು ಈ ಜಗತ್ತಿಗೆ ತಂದ ಪ್ರೀತಿ, ಶಾಂತಿ ಮತ್ತು ಮಾನವೀಯತೆಯ ಶಾಶ್ವತ ಸಂದೇಶವನ್ನು ನಾವು ಇವತ್ತು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಈ ಹಬ್ಬವು ಸಮಾಜದಲ್ಲಿ ಸತ್ಯ, ನ್ಯಾಯ ಹಾಗೂ ಸಹಜೀವನದ ಮೌಲ್ಯಗಳನ್ನು ಮರುಸ್ಥಾಪಿಸುವ ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ ಎಂದು ನಾವು ಸ್ಪಷ್ಟವಾಗಿ ಹೇಳಬಹುದು ಎಂದು ಧರ್ಮಾಧ್ಯಕ್ಷರಾದ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ರವರು ತಿಳಿಸಿದ್ದಾರೆ.
ನಮ್ಮ ಸಮಾಜದಲ್ಲಿ ಹಿಂಸೆ, ವಂಚನೆ, ತಪ್ಪು ಮಾಹಿತಿ ಮತ್ತು ಪರಸ್ಪರ ಅವಿಶ್ವಾಸವನ್ನು ಉತ್ತೇಜಿಸುವ ಸವಾಲುಗಳು ಹೆಚ್ಚುತ್ತಲೇ ಇವೆ. ಸಾರ್ವಜನಿಕ ವಲಯಗಳಲ್ಲಿ ಸತ್ಯ, ನ್ಯಾಯ, ಮತ್ತು ಸೌಹಾರ್ದ ಕುಂದುತ್ತಿರುವುದು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಚಿಂತಾಜನಕವಾಗಿ ಪರಿಣಮಿಸಿವೆ. ವ್ಯಕ್ತಿಯ ಖಾಸಗಿತನ, ಗೌರವಯುತ ಜೀವನ, ಹಾಗೂ ಧಾರ್ಮಿಕ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳು ದಿನದಿಂದ ದಿನಕ್ಕೆ ಅಪಾಯದ ಅಂಚಿಗೆ ಹೋಗುತ್ತಿವೆಯೇನೋ ಎಂಬಂತೆ ಕಾಣುತ್ತಿವೆ. ಜಾತಿ-ಧರ್ಮ-ಕುಲ-ಅಂತಸ್ತು ಇವುಗಳ ಆಧಾರದ ಮೇಲೆ ಒಬ್ಬರಿಗೊಬ್ಬರನ್ನು ಎತ್ತಿಕಟ್ಟುವುದು ಜಾಸ್ತಿಯಾಗುತ್ತಾ ಇದೆ. ಪ್ರತಿ ದಿನ ಸಾಕಷ್ಟು ಮುಗ್ಧ ಜನರು ವಂಚಕರ ಕೈಗಳಲ್ಲಿ ಬಲಿಪಶುಗಳಾಗುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಕೇಳಿ ಮನಕರಗುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ, ಯೇಸು ಕ್ರಿಸ್ತನ ಜನನದ ಹಬ್ಬವು ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಹಾಗೂ ಪ್ರತಿಯೊಂದು ಸಂಸ್ಥೆಗೂ ಒಂದು ವಿಶೇಷ ಕರೆಯನ್ನು ನೀಡುತ್ತದೆ. ಕರೆ, ಪರಸ್ಪರ ಗೌರವವನ್ನು ಬೆಳೆಸಲು; ಕರೆ, ಪ್ರತಿಯೊಬ್ಬರ ಘನತೆಯನ್ನು ಕಾಪಾಡಲು; ಕರೆ, ಅಸತ್ಯ, ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ನಿವಾರಿಸಲು: ಕರೆ, ಹಿಂಸೆಗೆ ಬದಲಾಗಿ ಶಾಂತಿ ಮತ್ತು ಸಂವಾದದ ಮಾರ್ಗವನ್ನು ಅನುಸರಿಸಲು ಹಾಗೂ ಸಮಾಜದ ಒಗ್ಗಟ್ಟನ್ನು ಬಲಪಡಿಸಲು ಎಂದರು.
ಸತ್ಯ, ಪಾರದರ್ಶಕತೆ ಮತ್ತು ನೈತಿಕತೆಯನ್ನು ರಕ್ಷಿಸುವುದು ಕೇವಲ ಕಾನೂನುಬದ್ಧ ಕರ್ತವ್ಯ ಮಾತ್ರವಲ್ಲ, ಅದು ಸಮಾಜದ ಭವಿಷ್ಯದ ಮೂಲಭೂತ ಆಧಾರ ಸ್ತಂಭ ಕೂಡ ಜನಸಾಮಾನ್ಯರಾಗಲಿ, ಜನಪ್ರತಿನಿಧಿಗಳಾಗಲಿ, ಸರ್ಕಾರಗಳಾಗಲಿ, ಆಡಳಿತ ಸಂಸ್ಥೆಗಳಾಗಲಿ, ಎಲ್ಲರೂ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಸತ್ಯನಿಷ್ಠೆ, ಆಡಳಿತದಲ್ಲಿ ಪಾರದರ್ಶಕತೆ, ನಿರ್ಧಾರಗಳಲ್ಲಿ ನ್ಯಾಯ ಮತ್ತು ಕಾರ್ಯನಿರ್ವಹಣೆಯಲ್ಲಿ ಜನಪರ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಪ್ರಜೆಗಳ ಮೂಲಭೂತ ಹಾಗೂ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯೊಂದಿಗೆ ಪರಸ್ಪರ ಬಂಧುತ್ವವನ್ನು ವೃದ್ಧಿಗೊಳಿಸಲು ಶ್ರಮಿಸಬೇಕು. ಸಮಾಜವು ಶಾಂತಿಯಿಂದ ಮುಂದುವರಿಯಲು ಮತ್ತು ರಾಷ್ಟ್ರವು ನಿಜವಾದ ಅಭಿವೃದ್ಧಿಯ ಹಾದಿಯಲ್ಲಿ ಸಾಗಲು ನೈತಿಕತೆ, ಪಾರದರ್ಶಕತೆ ಹಾಗೂ ಸತ್ಯವನ್ನು ಕಾಪಾಡುವುದು ಪ್ರತಿಯೊಂದು ಸಂಸ್ಥೆಯ ಮತ್ತು ಪ್ರಜೆಯ ಆದ್ಯ ಕರ್ತವ್ಯ ಎಲ್ಲರ ಸಹಕಾರದಿಂದ, ಎಲ್ಲಾ ರೀತಿಗಳಲ್ಲಿ, ಎಲ್ಲರ ಅಭಿವೃದ್ಧಿ ಆಗಬೇಕಾದರೆ ಎಲ್ಲಾ ನಾಗರಿಕರನ್ನು ಗೌರವದಿಂದ ಮತ್ತು ಘನತೆಯಿಂದ ಕಾಣುವುದು ಅತ್ಯಗತ್ಯ ಎಂದರು.
ಹಾಗಾಗಿ, 2025-ನೇ ಜ್ಯೂಬಿಲಿ ವರ್ಷದ ಕ್ರಿಸ್ಮಸ್ ಹಬ್ಬವು ನಮ್ಮ ದೇಶಕ್ಕೆ ಶಾಂತಿ, ಸಮಾಜಕ್ಕೆ ಸಮನ್ವಯ, ಸಾರ್ವಜನಿಕ ಬದುಕಿಗೆ ನೈತಿಕ ಪುನರುಜ್ಜಿವನ ಮತ್ತು ಪ್ರತಿಯೊಬ್ಬ ನಾಗರಿಕನ ಜೀವನಕ್ಕೆ ಭರವಸೆಯ ಹೊಸ ಕಿರಣವನ್ನು ತಂದುಕೊಡಲಿ ಎಂದು ನನ್ನ ಆಶಯ, ಪ್ರೀತಿ, ಸತ್ಯ ಮತ್ತು ಶಾಂತಿಯ ಬೆಳಕು ನಮ್ಮ ಮನ-ಮನೆಗಳಲ್ಲಿ ಮಾತ್ರವಲ್ಲ, ಸಾರ್ವಜನಿಕ ವ್ಯವಸ್ಥೆಯಲ್ಲಿ, ಎಲ್ಲಾ ರೀತಿಯ ಸಂಸ್ಥೆಗಳಲ್ಲಿ ಮತ್ತು ರಾಷ್ಟ್ರದ ನಿರ್ಧಾರಗಳಲ್ಲಿ ಸಹ ಹೊಳೆಯಲಿ ಎಂಬುವುದೇ ನನ್ನ ಪ್ರಾರ್ಥನೆ. ಬೆಳಕು ಕತ್ತಲನ್ನು ನಿವಾರಿಸುತ್ತದೆ, ಪ್ರೀತಿ ದ್ವೇಷವನ್ನು ಗೆಲ್ಲುತ್ತದೆ. ಹಾಗೂ ಶಾಂತಿ ಭಯವನ್ನು ಹೋಗಲಾಡಿಸುತ್ತದೆ ಎಂಬ ಸತ್ಯವೇ ನಮ್ಮದಾಗಲಿ ಎಂದರು.
ನಾಡಿನ ಸಮಸ್ತ ಬಂಧುಗಳಿಗೆ ಕ್ರಿಸ್ಮಸ್ ಹಬ್ಬದ ಹಾಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು; ತಮ್ಮೆಲ್ಲರ ಮೇಲೆ ದೇವರ ಶೀರ್ವಾದಗಳನ್ನು ಆಶಿಸುತ್ತೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಫಾ. ಮ್ಯಾಕ್ಸಿಮ್ ನೊರೋನ್ಹಾ,ಜಾನ್ ಡಿಸಿಲ್ವ,ರೊಯ್ ಕ್ಯಾಸ್ಟಲಿನೋ,ಇಲಿಯಾಸ್ ಫೆರ್ನಾಂಡಿಸ್,ಹಾಗೂ ಫಾ ಜೋನ್ ಬಾಪ್ಟಿ ಸಲ್ಡಾನ ರವರು ಉಪಸ್ಥಿತರಿದ್ದರು.

