ಅತೀ ಕಿರಿಯ ವಿದೂಷಿ ಎಂಬ ಅಪರೂಪದ ಸಾಧನೆಯನ್ನು ತಮ್ಮದಾಗಿಸಿಕೊಂಡಿರುವ ಕುಮಾರಿ ಶ್ರೇಯ ರಾವ್ ಸಣ್ಣಯ್ಯರ ಭರತನಾಟ್ಯ ರಂಗಪ್ರವೇಶ ಸಮಾರಂಭವು ಫೆಬ್ರವರಿ 22ರಂದು ಸಂಜೆ 5 ಗಂಟೆಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭವ್ಯವಾಗಿ ನಡೆಯಲಿದೆ ಎಂದು ನೃತ್ಯ ಸುಧಾ (ರಿ) ಸಂಸ್ಥೆಯ ಸ್ಥಾಪಕಿ ಸೌಮ್ಯ ಸುಧೀಂದ್ರ ರಾವ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೇಯ ಅವರ ರಂಗಪ್ರವೇಶವು ನೃತ್ಯಪ್ರಿಯರಿಗೆ ಒಂದು ವಿಶಿಷ್ಟ ಸಂಭ್ರಮವಾಗಲಿದೆ ಎಂದು ಹೇಳಿದರು. ಕಿರಿಯ ವಯಸ್ಸಿನಲ್ಲೇ ಭರತನಾಟ್ಯದಲ್ಲಿ ಸಾಧನೆ ಮಾಡಿರುವ ಶ್ರೇಯ ಅವರ ಪ್ರತಿಭೆ ಗಮನಾರ್ಹವಾಗಿದ್ದು, ಈ ಕಾರ್ಯಕ್ರಮವು ಅವರ ಕಲಾಜೀವನದ ಮಹತ್ವದ ಮೈಲುಗಲ್ಲಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಲು ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೊಹನ್ ಕುಮಾರ್ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಉಪಕುಲಪತಿ ರಿವ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ., ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರೊಫೆಸರ್ ಕೆ. ರಾಮ್ ಮೂರ್ತಿ ರಾವ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಸತೀಶ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೇಯ ಅವರ ಮೃದಂಗ ಗುರು ವಿದ್ವಾನ್ ರವಿಕುಮಾರ್ ಕುಂಜೂರು ಅವರಿಗೆ ಗುರು ವಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಸುಧೀಂದ್ರ ರಾವ್, ವಿದೂಷಿ ಕುಮಾರಿ ಶ್ರೇಯ ರಾವ್, ವಿದೂಷಿ ಸಹನಾ ಹಾಗೂ ನವ್ಯ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಆಸಕ್ತರು, ನೃತ್ಯಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಸ್ಥೆ ಮನವಿ ಮಾಡಿದೆ.


