ಮಂಗಳೂರಿನ ಜನನಿಬಿಡ ಪ್ರದೇಶವಾಗಿರುವ ಹಂಪನಕಟ್ಟೆ ಪ್ರದೇಶವು ವಿಶ್ವವಿದ್ಯಾನಿಲಯ ಕಾಲೇಜು, ಮಿನಿ ವಿಧಾನಸೌಧ, ಪುರಭವನ ಸೇರಿದಂತೆ ಹಲವು ಸರಕಾರಿ ಕಛೇರಿ, ಬ್ಯಾಂಕ್ ಹಾಗೂ ವಾಣಿಜ್ಯ ಮಳಿಗೆಗಳನ್ನು ಹೊಂದಿದ್ದು, ದಿನನಿತ್ಯ ಸಾವಿರಾರು ವಾಹನಗಳು ಹಾಗೂ ಸಾರ್ವಜನಿಕರು ನಡೆದಾಡುತ್ತಿರುತ್ತಾರೆ. ವಿಶ್ವವಿದ್ಯಾನಿಲಯ ಕಾಲೇಜಿನಿಂದ ಕ್ಲಾಕ್ ಟವರ್ ವರೆಗಿನ ರಸ್ತೆ ವಿಭಜಕದಲ್ಲಿ ಕೆಲವು ಕಡೆ ಬ್ಯಾರಿಕೇಡ್ ಅಳವಡಿಸದೆ ಇರುವುದರಿಂದ ಇಲ್ಲಿ ಶಾಲಾ ಕಾಲೇಜುಗಳ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುವುದರಿಂದ ವಾಹನ ಚಾಲಕರಿಗೆ ತೊಂದರೆಯಾಗುತ್ತಿರುವುದಲ್ಲದೆ ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ. ಇದಲ್ಲದೆ ಕ್ಲಾಕ್ ಟವರಿನ ಜಾಗದಲ್ಲಿ ಕೆಲವರು ವಾಹನಗಳನ್ನು ನಿಲ್ಲಿಸಿ ಸಮಸ್ಯೆ ತಂದೊಡ್ಡುತ್ತಿದ್ದಾರೆ.ಸಾರ್ವಜನಿಕರು ತುಳುನಾಡ ರಕ್ಷಣಾ ವೇದಿಕೆ ಗಮನಕ್ಕೆ ತಂದಿದ್ದರು.

ಆದುದರಿಂದ ಕೂಡಲೇ ಜನರ ಮತ್ತು ವಾಹನ ಚಾಲಕರ ಸುರಕ್ಷತೆ ದೃಷ್ಟಿಯಿಂದ ವಿಶ್ವವಿದ್ಯಾನಿಲಯ ಕಾಲೇಜ್ ನಿಂದ ಕ್ಲಾಕ್ ಟವರ್ ವರೆಗಿನ ರಸ್ತೆ ವಿಭಜಕಕ್ಕೆ ಬ್ಯಾರಿಕೇಡ್ ಅಳವಡಿಸುವಂತೆ ಮಹಾನಗರ ಪಾಲಿಕೆಗೆ ನಿರ್ದೇಶನ ನೀಡುವಂತೆ ದಿನಾಂಕ 04-03-2025 ರಂದು ಮಂಗಳೂರು ನಗರ ವಿಭಾಗ ಸಂಚಾರ ಮತ್ತು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರವಿಶಂಕರ್ ರವರನ್ನು ತುರ್ತಾಗಿ ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಭೇಟಿ ಮಾಡಿ, ಮನವಿ ನೀಡಿ ಅಪಘಾತ ಸಂಭವಿಸುವ ಮುನ್ನ ತುರ್ತಾಗಿ ಗಮನ ಹರಿಸುವ ಗಂಭೀರತೆ ಬಗ್ಗೆ ವಿವರಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು .