ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಪಿಎಂಇಜಿಪಿ (PMEGP) ಯೋಜನೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ನಡೆದಿದ್ದು, ಈ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಬ್ರಹ್ಮಾವರದ ಕೌಶಲ್ಯ ಎಂದು ಗುರುತಿಸಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯಂತೆ, 2023ರ ನವೆಂಬರ್ನಲ್ಲಿ ಕೌಶಲ್ಯಳು ಬಾರಕೂರು ಹೇರಾಡಿಯ ಸರಿತಾ ಲೂವಿಸ್ ಎಂಬವರನ್ನು ಸಂಪರ್ಕಿಸಿ, ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿದ್ದರು.
ಆ ನಂತರ ಲೋನ್ ಪ್ರಕ್ರಿಯೆ ಮುಂದುವರಿಸಲು ಬೇರೆ ಬೇರೆ ಕಾರಣಗಳನ್ನು ಹೇಳಿ ಸರಿತಾ ಲೂವಿಸ್ ಅವರಿಂದ ಹಂತ ಹಂತವಾಗಿ ಹಣ ಪಾವತಿಸುವಂತೆ ಕೇಳಿದ್ದಳು. ಅದರಂತೆ ಸರಿತಾ ಲೂವಿಸ್ ಕೌಶಲ್ಯಳ ಖಾತೆಗೆ ಹಾಗೂ ಆಕೆಯ ತಿಳಿಸಿದ ವ್ಯಕ್ತಿಗಳಾದ ಸಂದೇಶ್, ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಮತ್ತು ಭಾರತಿ ಸಿಂಗ್ ಇವರ ಖಾತೆಗಳಿಗೆ ಒಟ್ಟು ₹80,72,000 ಹಣ ವರ್ಗಾಯಿಸಿದ್ದಾಗಿ ದೂರು ನೀಡಲಾಗಿದೆ.
ಇದೇ ರೀತಿಯಲ್ಲಿ, ಕೌಶಲ್ಯಳು ಅಂಜಲಿನ್ ಡಿಸಿಲ್ವಾ ಎಂಬ ಮಹಿಳೆಗೆ ಸಹ ಪಿಎಂಇಜಿಪಿ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ, ಸರಿತಾ ಲೂವಿಸ್ ತಿಳಿಸಿದವರ ಖಾತೆಗಳಿಗೆ ₹65 ಲಕ್ಷ ಪಾವತಿಸುವಂತೆ ಹೇಳಿದ್ದಾಳೆ.
ಒಟ್ಟು ₹1,45,72,000 ಹಣವನ್ನು ಪಡೆದು, ಕೌಶಲ್ಯಳು ಬ್ಯಾಂಕ್ ನೌಕರರೆಂದು ನಟಿಸಿ ಇಬ್ಬರನ್ನೂ ವಂಚಿಸಿದ್ದಾಳೆ ಎಂದು ಆರೋಪವಿದೆ.
ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಕೌಶಲ್ಯಳನ್ನು ಬಂಧಿಸಲಾಗಿದೆ.
ಪೊಲೀಸರು ಇದೀಗ ಕೌಶಲ್ಯಳ ಸಹಚರರ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
