ಮಂಗಳೂರು, ನವೆಂಬರ್ 22: ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದರೊಂದಿಗೆ ಯುವ ಪೀಳಿಗೆಯಲ್ಲಿ ಸಹಕಾರಿ ಚಳವಳಿಯ ಬಗ್ಗೆ ಆಸಕ್ತಿ ಮತ್ತು ಜವಾಬ್ದಾರಿಯುತ ನಾಯಕತ್ವವನ್ನು ಬೆಳೆಸುವ ಉದ್ದೇಶದಿಂದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ–2026ರ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.) ಹಾಗೂ ತುಳುನಾಡ ಸೂರ್ಯ ಪತ್ರಿಕೆಯ ಸಹಯೋಗದಲ್ಲಿ ನವೆಂಬರ್ 17ರಂದು ಮಂಗಳೂರಿನ ಉರ್ವಸ್ಟೋರ್ನ ತುಳು ಭವನದಲ್ಲಿ ಆಯೋಜಿಸಲಾಗಿದ್ದ ‘ತೌಳವ ಸಹಕಾರಿ ಪ್ರಶಸ್ತಿ–2026’ ಪ್ರದಾನ ಸಮಾರಂಭವು ವೈಭವದಿಂದ ನಡೆಯಿತು.
ಕಾರ್ಯಕ್ರಮವನ್ನು ಮೂಡುಬಿದಿರೆ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಿ.ಕೆ. ಗ್ರೂಪ್ ಆಫ್ ಕಂಪನೀಸ್ನ ಸಂಸ್ಥಾಪಕರು ಹಾಗೂ ಡಿ.ಕೆ. ಬಿಸಿನೆಸ್ ಆ್ಯಂಡ್ ಟೆಕ್ನಾಲಜಿ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕರಾದ ಆಲ್ವಿನ್ ಜೋಯೆಲ್ ನೊರೊನ್ಹಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಧೂರು ಕ್ಷೇತ್ರದ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಶಾಸಕ ವೇದವ್ಯಾಸ ಕಾಮತ್, ಡಾ. ಪಿ.ಎಲ್. ಧರ್ಮ, ಕಿಶೋರ್ ಆಳ್ವ, ಎ.ಸಿ. ಭಂಡಾರಿ, ಕಿರಣ್ ಬುಡ್ಲೆಗುತ್ತು, ಅರ್. ಧನ್ರಾಜ್, ಅನಿಲ್ ದಾಸ್, ಡಾ. ಆಶಾಲತಾ ಪಿ., ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೆಳ್ಮಣ್ ನಾಗರಿಕರ ಹಾಗೂ ಹಿರಿಯ ನಾಗರಿಕರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷೆ ಶ್ರೀಮತಿ ರಿಥಿಷಾ ಪೂಜಾರಿ ಅವರಿಗೆ ‘ತೌಳವ ಸಹಕಾರಿ ರತ್ನ ಪ್ರಶಸ್ತಿ–2026’ ಪ್ರದಾನ ಮಾಡಿ ಗೌರವಿಸಲಾಯಿತು.
ಯುವ ವಯಸ್ಸಿನಲ್ಲಿಯೇ ಸಹಕಾರಿ ಸಂಸ್ಥೆಯ ಅಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ರಿಥಿಷಾ ಪೂಜಾರಿ ಅವರು ಸಂಸ್ಥೆಯ ಆಡಳಿತ ನಿರ್ವಹಣೆ, ಶಾಖೆಯ ಕಾರ್ಯಕ್ಷಮತೆ ಹೆಚ್ಚಿಸುವುದು, ಆರ್ಥಿಕ ಶಿಸ್ತು ಕಾಪಾಡುವುದು ಹಾಗೂ ಸಂಸ್ಥೆಯ ವ್ಯವಹಾರಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಕಡಿಮೆ ಅವಧಿಯಲ್ಲಿಯೇ ಸಂಸ್ಥೆಯನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಲು ತೋರಿಸುತ್ತಿರುವ ಪರಿಶ್ರಮ ಮತ್ತು ನಾಯಕತ್ವವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು.
ಅದೇ ರೀತಿ ಬೆಳ್ಮಣ್ ನಾಗರಿಕರ ಹಾಗೂ ಹಿರಿಯ ನಾಗರಿಕರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಶಮಿತ್ ಶಶಿಕುಮಾರ್ ಪೂಜಾರಿ ಅವರಿಗೆ ‘ತೌಳವ ಸಹಕಾರಿ ಸಾಧಕ ಪ್ರಶಸ್ತಿ–2026’ ಪ್ರದಾನ ಮಾಡಿ ಗೌರವಿಸಲಾಯಿತು.
ವ್ಯವಹಾರ ನಿರ್ವಹಣೆಯಲ್ಲಿ ಪದವಿ ಪಡೆದಿರುವ ಶಮಿತ್ ಅವರು ಯುವ ವಯಸ್ಸಿನಲ್ಲಿಯೇ ಸಹಕಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಂಸ್ಥೆಯ ದೈನಂದಿನ ಆಡಳಿತ, ಸಿಬ್ಬಂದಿ ನಿರ್ವಹಣೆ, ವ್ಯವಹಾರಿಕ ಚಟುವಟಿಕೆಗಳ ಸಮನ್ವಯ ಹಾಗೂ ಶಾಖೆಯ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಗ್ರಾಹಕ ಸ್ನೇಹಿ ಸೇವೆ, ಸಿಬ್ಬಂದಿಯೊಂದಿಗೆ ಉತ್ತಮ ಸಮನ್ವಯ ಮತ್ತು ಸಂಸ್ಥೆಯನ್ನು ಲಾಭದಾಯಕವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಅವರ ಕಾರ್ಯದಕ್ಷತೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಹಕಾರ ಕ್ಷೇತ್ರಕ್ಕೆ ಯುವಜನರ ಕೊಡುಗೆ ಅಗತ್ಯ
ಸಹಕಾರ ಚಳವಳಿ ಕೇವಲ ಆರ್ಥಿಕ ವ್ಯವಹಾರಗಳಿಗೆ ಸೀಮಿತವಾಗಿರದೆ, ಪರಸ್ಪರ ನಂಬಿಕೆ, ಸಹಕಾರ, ಸಾಮಾಜಿಕ ಹೊಣೆಗಾರಿಕೆ ಮತ್ತು ಸಾಮೂಹಿಕ ಅಭಿವೃದ್ಧಿಯ ಆಶಯಗಳನ್ನು ಒಳಗೊಂಡಿದೆ. ಯುವಜನರು ಸಹಕಾರಿ ಸಂಸ್ಥೆಗಳ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಸಹಕಾರ ಕ್ಷೇತ್ರಕ್ಕೆ ಹೊಸ ಚೈತನ್ಯ ದೊರೆಯಲಿದೆ. ಮಹಿಳೆಯರು ಮತ್ತು ಯುವಕರು ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿಕೊಂಡು ಸಂಸ್ಥೆಗಳ ಪ್ರಗತಿಗೆ ಶ್ರಮಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂಬ ಅಭಿಪ್ರಾಯ ಗಣ್ಯರಿಂದ ವ್ಯಕ್ತವಾಯಿತು.
ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ದುಡಿಯುವ ಸಾಧಕರನ್ನು ಗುರುತಿಸಿ ಗೌರವಿಸುವುದು ಮತ್ತು ಹೊಸ ತಲೆಮಾರಿನ ಸಹಕಾರಿ ನಾಯಕರನ್ನು ಪ್ರೋತ್ಸಾಹಿಸುವುದು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ತುಳುನಾಡಿನ ಸಹಕಾರಿ ಕ್ಷೇತ್ರದ ಸಾಧನೆಗಳನ್ನು ಸಮಾಜದ ಮುಂದೆ ಪರಿಚಯಿಸುವ ಮೂಲಕ ಸಹಕಾರ ಚಳವಳಿಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಸಾಧಕರು, ವಿವಿಧ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

