ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಾಖಲಾಗಿದ್ದ ಒಟ್ಟು ಒಂಬತ್ತು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳಾ ಆರೋಪಿತೆಯನ್ನು ಬರ್ಕೆ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬರ್ಕೆ ಪೊಲೀಸ್ ಠಾಣೆಯ ಮೊಕದ್ದಮೆ ನಂ. 77/2025 (ಕಲಂ 316(2), 318(2), 3(5) BNS–2023) ಅಡಿಯಲ್ಲಿ ನಡೆದ ಪ್ರಕರಣದಲ್ಲಿ, ಮಂಗಳೂರಿನ ಎಂಪೈರ್ ಮಾಲ್ನಲ್ಲಿರುವ ಲ್ಯಾಪ್ಟಾಪ್ ಬಜಾರ್ ಅಂಗಡಿ ಮಾಲೀಕ ಜಯರಾಯ ಅವರು ಪಿರ್ಯಾದಿ ಆಗಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿತೆ ಫರಿದಾ ಬೇಗಂ @ ಫರಿದಾ (28), ಪತಿ ರಮಿಜ್ ರಾಜ್, ಮುತ್ತೂರು ಗ್ರಾಮ, ಮಂಗಳೂರು ತಾಲೂಕು ನಿವಾಸಿ — ತಮ್ಮ ಪರಿಚಿತನ ಮೂಲಕ ಮಾನ್ಯತೆ ಇಲ್ಲದ ಬ್ಯಾಂಕ್ ಚೆಕ್ಗಳನ್ನು ನೀಡಿ, ರೂ. 1,98,000 ಮೌಲ್ಯದ ಲ್ಯಾಪ್ಟಾಪ್ಗಳನ್ನು ಖರೀದಿಸಿ ಪಾವತಿಸದೇ ವಂಚನೆ ನಡೆಸಿದ್ದಾಳೆ.
ತನಿಖಾಧಿಕಾರಿ ವಿನಾಯಕ ತೊರಗಲ್ ಹಾಗೂ ಮಹಿಳಾ ಸಿಬ್ಬಂದಿಯವರಿಂದ, ಪೊಲೀಸ್ ನಿರೀಕ್ಷಕ ಮೋಹನ ಕೊಟ್ಟಾರಿ ಅವರ ನೇತೃತ್ವದಲ್ಲಿ, ಆರೋಪಿತೆಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಆಕೆಯನ್ನು ಅಕ್ಟೋಬರ್ 19, 2025ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನವೆಂಬರ್ 3, 2025ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ತನಿಖೆಯಿಂದ ತಿಳಿದುಬಂದಂತೆ, ಫರಿದಾ ಬೇಗಂ ವಿವಿಧ ಚಿನ್ನಾಭರಣ ಮತ್ತು ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಭೇಟಿ ನೀಡಿ, ಮಾಲಕರ ವಿಶ್ವಾಸ ಗಳಿಸಿ ಮಾನ್ಯತೆ ಇಲ್ಲದ ಚೆಕ್ಗಳ ಮೂಲಕ ಬೆಲೆಬಾಳುವ ವಸ್ತುಗಳನ್ನು ಖರೀದಿಸಿ ವಂಚನೆ ಮಾಡುತ್ತಿದ್ದಾಳೆ.
ಆಕೆಯ ವಿರುದ್ಧ ಈಗಾಗಲೇ ಕೆಳಗಿನ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ:
• ಬರ್ಕೆ ಪೊಲೀಸ್ ಠಾಣೆ – 1 ಪ್ರಕರಣ
• ಕಾವೂರು ಪೊಲೀಸ್ ಠಾಣೆ – 1 ಪ್ರಕರಣ
• ಬಜ್ಪೆ ಪೊಲೀಸ್ ಠಾಣೆ – 1 ಪ್ರಕರಣ
• ಮೂಡಬಿದ್ರೆ ಪೊಲೀಸ್ ಠಾಣೆ – 1 ಪ್ರಕರಣ
• ಮುಲ್ಕಿ ಪೊಲೀಸ್ ಠಾಣೆ – 1 ಪ್ರಕರಣ
• ಪುತ್ತೂರು ನಗರ ಪೊಲೀಸ್ ಠಾಣೆ – 3 ಪ್ರಕರಣಗಳು
• ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್ ಠಾಣೆ – 1 ಪ್ರಕರಣ
ಅಲ್ಲದೇ, ಮುಲ್ಕಿ ಠಾಣೆಯ ಪ್ರಕರಣದಲ್ಲಿ ಆಕೆ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ಇರುವುದರಿಂದ ವಾರೆಂಟ್ ಹೊರಡಿಸಲಾಗಿದೆ. ಕಾವೂರು ಮತ್ತು ಮೂಡಬಿದ್ರೆ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಕೂಡಾ ಆಕೆ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.


