ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ಅನುಷ್ಠಾನಕ್ಕೆ ಸರಕಾರದ ಆದೇಶ | 20 ಭಾಷಾಂತರಕಾರರ ನೇಮಕಕ್ಕೆ ಅನುಮತಿ
ಮಂಗಳೂರು/ಉಡುಪಿ, ನ. 27: ಕರಾವಳಿ ಭಾಗದ ಜನರ ಹಲವು ವರ್ಷಗಳ ನಿರಂತರ ಹೋರಾಟ ಮತ್ತು ಬೇಡಿಕೆಗೆ ಮಹತ್ವದ ಸ್ಪಂದನೆ ದೊರೆತಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಅನುಮೋದಿಸಿ, ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಸರಕಾರದ ಈ ನಿರ್ಧಾರದಿಂದ ಕರಾವಳಿ ಭಾಗದ ತುಳುವರ ಬಹುದಿನಗಳ ಕನಸು ನನಸಾಗುವತ್ತ ಮಹತ್ವದ ಹೆಜ್ಜೆ ಇಟ್ಟಂತಾಗಿದೆ. ಇನ್ನು ಮುಂದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ತುಳು ಭಾಷೆಯಲ್ಲಿಯೇ ಅರ್ಜಿ, ಮನವಿ ಹಾಗೂ ಇತರ ವಿನಂತಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಂದ ತುಳುವಿನಲ್ಲಿ ಸ್ವೀಕರಿಸುವ ಅರ್ಜಿ ಮತ್ತು ಮನವಿಗಳಿಗೆ ಅಧಿಕಾರಿಗಳು ಕನ್ನಡದ ಜತೆಗೆ ತುಳು ಭಾಷೆಯಲ್ಲಿಯೂ ಉತ್ತರ ನೀಡಬೇಕಾಗುತ್ತದೆ.
ಅಲ್ಲದೆ, ಜಿಲ್ಲಾಧಿಕಾರಿಗಳ ಹಂತದಲ್ಲಿ ಹೊರಡಿಸುವ ಪ್ರಮುಖ ಆದೇಶಗಳು ಹಾಗೂ ಸರಕಾರಿ ಕಚೇರಿಗಳ ಪ್ರಮುಖ ಸೂಚನಾ ಫಲಕಗಳನ್ನು ಕನ್ನಡದ ಜತೆಗೆ ತುಳು ಭಾಷೆಯಲ್ಲಿಯೂ ಪ್ರದರ್ಶಿಸುವ ವ್ಯವಸ್ಥೆ ಜಾರಿಗೊಳ್ಳಲಿದೆ. ಇದರಿಂದ ಆಡಳಿತ ಮತ್ತು ಸಾರ್ವಜನಿಕರ ನಡುವಿನ ಸಂವಹನದಲ್ಲಿ ತುಳು ಭಾಷೆಯ ಬಳಕೆಗೆ ಅಧಿಕೃತ ಅವಕಾಶ ದೊರೆಯಲಿದೆ.
ಆಡಳಿತಾತ್ಮಕ ವ್ಯವಹಾರಗಳಲ್ಲಿ ತುಳು ಭಾಷೆಯನ್ನು ಕನ್ನಡ ಲಿಪಿಯಲ್ಲಿಯೇ ಬಳಸಲು ನಿರ್ಧರಿಸಲಾಗಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಕಚೇರಿಗಳಲ್ಲಿ ಪ್ರತ್ಯೇಕ ಅನುಷ್ಠಾನ ಘಟಕಗಳನ್ನು ಸ್ಥಾಪಿಸಲು ಸರಕಾರ ಮುಂದಾಗಿದೆ.
ಇದರೊಂದಿಗೆ ಎರಡೂ ಜಿಲ್ಲೆಗಳಲ್ಲಿ ಒಟ್ಟು 20 ಭಾಷಾಂತರಕಾರರನ್ನು ನೇಮಕ ಮಾಡಿಕೊಳ್ಳಲು ಸರಕಾರ ಅನುಮತಿ ನೀಡಿದೆ. ಭಾಷಾಂತರಕಾರರಿಗೆ ಎಲ್ಲ ವೆಚ್ಚಗಳೂ ಸೇರಿದಂತೆ ಮಾಸಿಕ 30 ಸಾವಿರ ರೂ. ಗೌರವ ಸಂಭಾವನೆ ನಿಗದಿಪಡಿಸಲಾಗಿದೆ.
ತುಳು ಭಾಷೆಯನ್ನು ಆಡಳಿತಾತ್ಮಕವಾಗಿ ಬಳಸಲು ಅವಕಾಶ ಕಲ್ಪಿಸಿರುವ ಈ ನಿರ್ಧಾರವು ತುಳು ಭಾಷೆಯ ಬೆಳವಣಿಗೆ, ಸಂರಕ್ಷಣೆ ಹಾಗೂ ಭಾಷಿಕರ ಹಕ್ಕುಗಳ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿದೆ. ಸರಕಾರಿ ಆಡಳಿತದಲ್ಲಿ ತುಳು ಭಾಷೆಗೆ ಸ್ಥಾನ ಕಲ್ಪಿಸುವ ಮೂಲಕ ತುಳುನಾಡಿನ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಗೆ ಹೊಸ ಗೌರವ ದೊರೆತಂತಾಗಿದೆ.

