ಮಂಗಳೂರು, ನವೆಂಬರ್ 22: ಸಹಕಾರಿ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳ ಕಾಲ ಸಲ್ಲಿಸಿರುವ ಸೇವೆ, ದಕ್ಷ ಆಡಳಿತ, ಸಂಘಟನಾ ಸಾಮರ್ಥ್ಯ ಹಾಗೂ ಜನಪರ ಕಾಳಜಿಯನ್ನು ಗುರುತಿಸಿ, ಪ್ರಿಯದರ್ಶಿನಿ ಸಹಕಾರ ಸಂಘ (ನಿ.), ಹಳೆಯಂಗಡಿ ಇದರ ಅಧ್ಯಕ್ಷರಾದ ಶ್ರೀ ಹೆಚ್. ವಸಂತ್ ಬೆರ್ನಾಡ್ ಅವರಿಗೆ ಪ್ರತಿಷ್ಠಿತ ‘ತೌಳವ ಸಹಕಾರ ರತ್ನ ಪ್ರಶಸ್ತಿ–2026’ ಪ್ರದಾನ ಮಾಡಿ ಗೌರವಿಸಲಾಯಿತು.
ತುಳುನಾಡ ರಕ್ಷಣಾ ವೇದಿಕೆ (ರಿ.) ಹಾಗೂ ತುಳುನಾಡ ಸೂರ್ಯ ಪತ್ರಿಕೆ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ–2026ರ ಅಂಗವಾಗಿ ನವೆಂಬರ್ 17ರಂದು ಮಂಗಳೂರಿನ ತುಳು ಭವನದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವ ನೀಡಲಾಯಿತು.
ಸಹಕಾರಿ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಅನುಭವ ಹೊಂದಿರುವ ಹೆಚ್. ವಸಂತ್ ಬೆರ್ನಾಡ್ ಅವರು, ಸಹಕಾರಿ ಧುರೀಣರಾದ ದಿವಂಗತ ಎಚ್. ನಾರಾಯಣ ಸನಿಲ್ ಹಾಗೂ ದಿವಂಗತ ಪಂಜದಗುುತ್ತು ಶಾಂತಾರಾಮ ಶೆಟ್ಟಿಯವರ ಪ್ರೇರಣೆ ಮತ್ತು ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ಮಾರ್ಗದರ್ಶನದಲ್ಲಿ 2021ರ ಮೇ 20ರಂದು ಹಳೆಯಂಗಡಿಯಲ್ಲಿ ಕೇವಲ 16 ನಿರ್ದೇಶಕರೊಂದಿಗೆ ಆರಂಭಗೊಂಡ ಪ್ರಿಯದರ್ಶಿನಿ ಸಹಕಾರ ಸಂಘವನ್ನು ಅತ್ಯಲ್ಪ ಅವಧಿಯಲ್ಲಿ ಉಭಯ ಜಿಲ್ಲೆಗಳಲ್ಲಿ ಗುರುತಿಸಲ್ಪಟ್ಟ ಪ್ರಗತಿಪರ ಸಹಕಾರಿ ಸಂಸ್ಥೆಯಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಕೋವಿಡ್ ಸಂಕಷ್ಟದ ನಡುವೆಯೂ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಮೊದಲ ವರ್ಷದಲ್ಲಿಯೇ 7.30 ಕೋಟಿ ರೂ. ನಿಕ್ಷೇಪ ಸಂಗ್ರಹಿಸಿ, 58 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ ಸಂಘವನ್ನು ಲಾಭದಾಯಕವಾಗಿ ಮುನ್ನಡೆಸಿರುವುದು ಅವರ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ.
ಪಡುಬಿದ್ರೆ, ಕಿನ್ನಿಗೋಳಿ, ಮೂಡುಬಿದಿರೆ ಹಾಗೂ ಉಡುಪಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಶಾಖೆಗಳನ್ನು ವಿಸ್ತರಿಸಿರುವ ಸಂಘವು 2025–26ನೇ ಸಾಲಿನಲ್ಲಿ 38.33 ಕೋಟಿ ರೂ. ನಿಕ್ಷೇಪ, 484.78 ಕೋಟಿ ರೂ. ವಾರ್ಷಿಕ ವಹಿವಾಟು ಹಾಗೂ 54,28,641.10 ರೂ. ನಿವ್ವಳ ಲಾಭ ದಾಖಲಿಸಿದೆ. ಸಂಘದ ನಿರಂತರ ಪ್ರಗತಿಯು ಅಧ್ಯಕ್ಷರ ಸಮರ್ಥ ನಾಯಕತ್ವ ಮತ್ತು ಆಡಳಿತಾತ್ಮಕ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.
ಸಂಘವು ಸತತವಾಗಿ ‘ಎ’ ಶ್ರೇಣಿಯ ಲೆಕ್ಕಪರಿಶೋಧನಾ ವರ್ಗೀಕರಣವನ್ನು ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 2023–24, 2024–25 ಹಾಗೂ 2025–26ನೇ ಸಾಲಿನ ವಿಶೇಷ ಸಾಧನಾ ಪ್ರಶಸ್ತಿಗಳನ್ನು ಗಳಿಸಿದೆ. ಅಲ್ಲದೆ, 72ನೇ ಅಖಿಲ ಭಾರತ ಸಹಕಾರ ಸಪ್ತಾಹ–2025ರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಪತ್ತಿನ ಸಹಕಾರ ಸಂಘ ಪ್ರಶಸ್ತಿಯನ್ನೂ ಪಡೆದುಕೊಂಡಿರುವುದು ಸಂಸ್ಥೆಯ ಸಾಧನೆಗೆ ಮತ್ತೊಂದು ಹೆಗ್ಗಳಿಕೆಯಾಗಿದೆ.
ಕೇವಲ ಆರ್ಥಿಕ ಬೆಳವಣಿಗೆಗೆ ಸೀಮಿತವಾಗದೆ, 75 ಸ್ವಸಹಾಯ ಗುಂಪುಗಳ ಮೂಲಕ 750 ಸದಸ್ಯರಿಗೆ ಆರ್ಥಿಕ ಸ್ವಾವಲಂಬನೆಯ ಅವಕಾಶ ಕಲ್ಪಿಸಿರುವುದು, ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಿರುವುದು, ಇ-ಸ್ಟಾಂಪ್ ಸೇವೆ ಹಾಗೂ ಆಧುನಿಕ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಿರುವುದು ಸಂಘದ ಜನಸ್ನೇಹಿ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.
ಸಿಬ್ಬಂದಿ ನೇಮಕಾತಿಯಲ್ಲಿ ವಿವಿಧ ಜಾತಿ, ಧರ್ಮ ಹಾಗೂ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆಯ ಆಶಯವನ್ನು ಕಾರ್ಯರೂಪಕ್ಕೆ ತಂದಿರುವುದು ವಸಂತ್ ಬೆರ್ನಾಡ್ ಅವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ.
ಸಹಕಾರಿ ಸಂಸ್ಥೆಯ ಅಭಿವೃದ್ಧಿಯ ಜೊತೆಗೆ ಸದಸ್ಯರ ಆರ್ಥಿಕ ಸಬಲೀಕರಣ, ಉದ್ಯೋಗ ಸೃಷ್ಟಿ, ಮಹಿಳಾ ಸ್ವಾವಲಂಬನೆ ಹಾಗೂ ಗ್ರಾಮೀಣ ಆರ್ಥಿಕ ಪ್ರಗತಿಗೆ ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಹಕಾರ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಸುದೀರ್ಘ ಸೇವೆ ಹಾಗೂ ಪ್ರಿಯದರ್ಶಿನಿ ಸಹಕಾರ ಸಂಘದ ಗಮನಾರ್ಹ ಸಾಧನೆಗಳನ್ನು ಗುರುತಿಸಿ ನೀಡಲಾದ ಈ ಪ್ರಶಸ್ತಿಯು ಅವರ ಸಹಕಾರಿ ಜೀವನದ ಸೇವೆಗೆ ಸಂದ ಗೌರವವಾಗಿದೆ.
‘ಸಹಕಾರದಿಂದ ಸಮೃದ್ಧಿ – ಸಹಭಾಗಿತ್ವದಿಂದ ಅಭಿವೃದ್ಧಿ’ ಎಂಬ ಸಹಕಾರ ಸಪ್ತಾಹದ ಆಶಯಕ್ಕೆ ಅನುಗುಣವಾಗಿ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಸಹಕಾರಿ ಚಳವಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಆಯೋಜಕರು ಕೈಗೊಂಡಿದ್ದಾರೆ.
ತುಳುನಾಡ ರಕ್ಷಣಾ ವೇದಿಕೆ (ರಿ.)ಯ ಸ್ಥಾಪಕ ಅಧ್ಯಕ್ಷ ಹಾಗೂ ತುಳುನಾಡ ಸೂರ್ಯ ಪತ್ರಿಕೆಯ ಸಂಪಾದಕ ಯೋಗೀಶ್ ಶೆಟ್ಟಿ ಜಪ್ಪು ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹೆಚ್. ವಸಂತ್ ಬೆರ್ನಾಡ್ ಅವರ ಮುಂದಿನ ಸಹಕಾರಿ ಸೇವಾ ಪಯಣವು ಇನ್ನಷ್ಟು ಯಶಸ್ಸು ಕಾಣಲಿ ಹಾಗೂ ತುಳುನಾಡಿನ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅವರ ಕೊಡುಗೆ ನಿರಂತರವಾಗಿರಲಿ ಎಂದು ಆಯೋಜಕರು ಅಭಿನಂದನೆ ಸಲ್ಲಿಸಿದರು.

