ಫ್ಲಾವಿಯಾ ಮಾರಿಯಾ ನೊರೊನ್ಹಾ ಅವರಿಗೆ ಸಹಕಾರಿ ರತ್ನ, ಜಗನ್ನಾಥ್ ಶಿರ್ಲಾಲ್ ಅವರಿಗೆ ಸಹಕಾರಿ ಸಿರಿ ಪ್ರಶಸ್ತಿ
ಜಗದೀಶ್ ಶೆಣೈ ಹಾಗೂ ಮಿಥುನ್ ಎಸ್. ಅಂಚನ್ ಅವರಿಗೆ ಸಹಕಾರಿ ಸಾಧಕ ಪ್ರಶಸ್ತಿ
ಮಂಗಳೂರು, ನವೆಂಬರ್ 18: ಸಹಕಾರಿ ಕ್ಷೇತ್ರದ ಅಭಿವೃದ್ಧಿ, ಆರ್ಥಿಕ ಸ್ವಾವಲಂಬನೆ, ಉದ್ಯಮಶೀಲತೆ ಹಾಗೂ ಸಾಮಾಜಿಕ ಪ್ರಗತಿಗೆ ಗಣನೀಯ ಕೊಡುಗೆ ನೀಡುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ, 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.) ಹಾಗೂ ತುಳುನಾಡ ಸೂರ್ಯ ಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 17ರಂದು ಮಂಗಳೂರಿನ ಉರ್ವಸ್ಟೋರ್ನ ತುಳು ಭವನದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೌಳವ ಸಹಕಾರಿ ಪ್ರಶಸ್ತಿ–2026’ ಪ್ರದಾನ ಮಾಡಿ ಗೌರವಿಸಲಾಯಿತು.
ಮೂಡುಬಿದಿರೆ ಜೈನಕಾಶಿಯ ಶ್ರೀ ದಿಗಂಬರ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ದೀಪ ಪ್ರಜ್ವಲಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಡಿ.ಕೆ. ಗ್ರೂಪ್ ಆಫ್ ಕಂಪನೀಸ್ನ ಸಂಸ್ಥಾಪಕರು ಹಾಗೂ ಡಿ.ಕೆ. ಬಿಸಿನೆಸ್ ಆ್ಯಂಡ್ ಟೆಕ್ನಾಲಜಿ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕರಾದ ಆಲ್ವಿನ್ ಜೋಯೆಲ್ ನೊರೊನ್ಹಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಡೂರು ಶ್ರೀ ಶಿವದುರ್ಗಾಂಬಾ ಮಠದ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ, ಅದಾನಿ ಗ್ರೂಪ್ನ ಅಧ್ಯಕ್ಷ ಹಾಗೂ ನಿರ್ದೇಶಕ ಕಿಶೋರ್ ಆಳ್ವ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಅದ್ಯಕ್ಷ ಕಿರಣ್ ಬುಡ್ಲೆಗುತ್ತು, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ದಾಸ್ ಪ್ರೋಮೋಷನ್ ಕೇರ್ ಟ್ರಸ್ಟ್ನ ಸ್ಥಾಪಕ ಅನಿಲ್ ದಾಸ್, ಗೋವಿಂದದಾಸ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆಶಾಲತಾ ಪಿ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೆರುಗು ನೀಡಿದರು.
ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ, ಸುರೇಂದ್ರ ಪೂಜಾರಿ ಹಾವಂಜೆ, ನಾಗಲಕ್ಷ್ಮಿ ಸುಬ್ರಹ್ಮಣ್ಯ ನಗರ, ಜಯ ಪೂಜಾರಿ ಲಕ್ಷ್ಮಿನಗರ ಸೇರಿದಂತೆ ಸಹಕಾರಿ, ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರು ಕಾರ್ಯಕ್ರಮದ ಸಂಘಟನೆಯ ನೇತೃತ್ವ ವಹಿಸಿದ್ದರು.
ತೌಳವ ಸಹಕಾರಿ ರತ್ನ ಪ್ರಶಸ್ತಿ–2026
ದಕ್ಷಿಣ ಕನ್ನಡ ಮ್ಯೂಚುವಲ್ ಬಿಸಿನೆಸ್ ನ್ಯೂ ಎಂಟರ್ಪ್ರೆನ್ಯೂರ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್, ಮಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಫ್ಲಾವಿಯಾ ಮಾರಿಯಾ ನೊರೊನ್ಹಾ ಅವರಿಗೆ ಪ್ರತಿಷ್ಠಿತ ‘ತೌಳವ ಸಹಕಾರಿ ರತ್ನ ಪ್ರಶಸ್ತಿ–2026’ ಪ್ರದಾನ ಮಾಡಲಾಯಿತು.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್, ರಿಲಯನ್ಸ್ ಕ್ಯಾಪಿಟಲ್, ಆದಿತ್ಯ ಬಿರ್ಲಾ ಕ್ಯಾಪಿಟಲ್ ಹಾಗೂ ರಿಲಯನ್ಸ್ ನಿಪ್ಪಾನ್ ಲೈಫ್ ಇನ್ಶೂರೆನ್ಸ್ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಣಕಾಸು, ಹೂಡಿಕೆ, ವಿಮೆ ಹಾಗೂ ಆಡಳಿತಾತ್ಮಕ ಕ್ಷೇತ್ರದಲ್ಲಿ ಗಳಿಸಿದ ಅನುಭವವನ್ನು ಸಹಕಾರಿ ಕ್ಷೇತ್ರದಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿರುವ ಅವರ ವೃತ್ತಿಪರ ಸಾಧನೆ, ನಾಯಕತ್ವ ಹಾಗೂ ಮಹಿಳಾ ಸಬಲೀಕರಣಕ್ಕೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು.
ತೌಳವ ಸಹಕಾರಿ ಸಿರಿ ಪ್ರಶಸ್ತಿ–2026
ದಕ್ಷಿಣ ಕನ್ನಡ ಮ್ಯೂಚುವಲ್ ಬಿಸಿನೆಸ್ ನವ ಉದ್ಯಮಿಗಳ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ನ ಉಪಾಧ್ಯಕ್ಷ ಶ್ರೀ ಜಗನ್ನಾಥ್ ಶಿರ್ಲಾಲ್ ಅವರಿಗೆ ‘ತೌಳವ ಸಹಕಾರಿ ಸಿರಿ ಪ್ರಶಸ್ತಿ–2026’ ಪ್ರದಾನ ಮಾಡಲಾಯಿತು.
ಆರೋಗ್ಯ ಸೇವೆ, ಸಮಾಜಕಾರ್ಯ, ಸಹಕಾರಿ ಕ್ಷೇತ್ರ, ಶಿಕ್ಷಣ, ಸಾಹಿತ್ಯ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ಸಲ್ಲಿಸಿರುವ ಬಹುಮುಖ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು. ಆರೋಗ್ಯ ಸಂಪರ್ಕ ಟ್ರಸ್ಟ್ನ ಸಂಸ್ಥಾಪಕರಾಗಿ, ಆರೋಗ್ಯ ಸೇವಾ ಕ್ಷೇತ್ರದಲ್ಲಿ ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಲ್ಲಿಸುತ್ತಿರುವ ಕೊಡುಗೆ ಪ್ರಶಸ್ತಿಗೆ ಪಾತ್ರವಾಯಿತು.
ತೌಳವ ಸಹಕಾರಿ ಸಾಧಕ ಪ್ರಶಸ್ತಿ–2026
ಸಹಕಾರಿ ಕ್ಷೇತ್ರದಲ್ಲಿ 25 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ದಕ್ಷಿಣ ಕನ್ನಡ ಮ್ಯೂಚುವಲ್ ಬಿಸಿನೆಸ್ ನ್ಯೂ ಎಂಟರ್ಪ್ರೆನ್ಯೂರ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ನಿರ್ದೇಶಕ ಶ್ರೀ ಜಗದೀಶ್ ಶೆಣೈ ಅವರಿಗೆ ‘ತೌಳವ ಸಹಕಾರಿ ಸಾಧಕ ಪ್ರಶಸ್ತಿ–2026’ ಪ್ರದಾನ ಮಾಡಲಾಯಿತು.
ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಜನಪಯೋಗಿ ಕಾರ್ಯಕ್ರಮಗಳ ನಿರ್ದೇಶಕರಾಗಿ ಹಾಗೂ ದಕ್ಷಿಣ ಕನ್ನಡ ಮ್ಯೂಚುವಲ್ ಬಿಸಿನೆಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಕಾರ್ಯದರ್ಶಿಯಾಗಿ ಸಲ್ಲಿಸುತ್ತಿರುವ ಸೇವೆ, ಉದ್ಯಮಶೀಲತೆ ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಗೌರವಿಸಲಾಯಿತು.
ದಕ್ಷಿಣ ಕನ್ನಡ ಮ್ಯೂಚುವಲ್ ಬಿಸಿನೆಸ್ ನವ ಉದ್ಯಮಿಗಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್, ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಿಥುನ್ ಎಸ್. ಅಂಚನ್ ಅವರಿಗೂ ‘ತೌಳವ ಸಹಕಾರಿ ಸಾಧಕ ಪ್ರಶಸ್ತಿ–2026’ ಪ್ರದಾನ ಮಾಡಲಾಯಿತು.
ಕಳೆದ ಆರು ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ, ಪಿಗ್ಮಿ ಸಂಗ್ರಹಕರಾಗಿ ವೃತ್ತಿಜೀವನ ಆರಂಭಿಸಿ ಸಹ ವ್ಯವಸ್ಥಾಪಕ, ವ್ಯವಸ್ಥಾಪಕ, ನಿರ್ದೇಶಕ ಹುದ್ದೆಗಳನ್ನು ನಿರ್ವಹಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬೆಳೆದಿರುವ ಅವರ ಪರಿಶ್ರಮ, ಕಾರ್ಯದಕ್ಷತೆ ಹಾಗೂ ಆಡಳಿತಾತ್ಮಕ ಸಾಮರ್ಥ್ಯವನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಹಕಾರಿ ಚಳವಳಿಗೆ ಪ್ರೋತ್ಸಾಹ ನೀಡುವ ಉದ್ದೇಶ
ಸಹಕಾರಿ ಸಂಸ್ಥೆಗಳು ಸಮಾಜದ ಆರ್ಥಿಕ ಅಭಿವೃದ್ಧಿ, ಸಣ್ಣ ಉದ್ಯಮಿಗಳ ಸ್ವಾವಲಂಬನೆ, ಮಹಿಳಾ ಸಬಲೀಕರಣ ಹಾಗೂ ಸಾಮಾನ್ಯ ಜನರ ಆರ್ಥಿಕ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಸಹಕಾರದ ಮೂಲ ಆಶಯವಾದ ಪರಸ್ಪರ ನಂಬಿಕೆ, ಸಹಭಾಗಿತ್ವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಇಂತಹ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಯುವಜನರಲ್ಲಿ ಸಹಕಾರಿ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ಸಹಕಾರಿ ಸಂಸ್ಥೆಗಳ ಬೆಳವಣಿಗೆಗೂ ಪ್ರೇರಣೆ ದೊರೆಯಲಿದೆ ಎಂದು ಆಯೋಜಕರು ಅಭಿಪ್ರಾಯಪಟ್ಟರು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಹಾಗೂ ತುಳುನಾಡ ಸೂರ್ಯ ಪತ್ರಿಕೆಯ ಸಂಪಾದಕ ಯೋಗೀಶ್ ಶೆಟ್ಟಿ ಜಪ್ಪು ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಶಸ್ತಿ ಪುರಸ್ಕೃತರಿಗೆ ಆಯೋಜಕರ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಸಹಕಾರಿ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ತುಳುನಾಡಿನ ಸಹಕಾರಿ ಚಳವಳಿಗೆ ಹೊಸ ಪ್ರೇರಣೆ ನೀಡಿದ ಕಾರ್ಯಕ್ರಮವಾಗಿ ಸಹಕಾರ ಸಪ್ತಾಹದ ಈ ಪ್ರಶಸ್ತಿ ಪ್ರದಾನ ಸಮಾರಂಭ ಗಮನ ಸೆಳೆಯಿತು.

