
ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ (ರಿ.) ಹಾಗೂ ತುಳುನಾಡ ಸೂರ್ಯ ಪತ್ರಿಕೆಯ ಜಂಟಿ ಆಶ್ರಯದಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ–2026ರ ಅಂಗವಾಗಿ ನವೆಂಬರ್ 17ರಂದು ಮಂಗಳೂರಿನ ಉರ್ವಾ ತುಳುಭವನದಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಶಿವ ದುರ್ಗಾಂಬ ಮಠದ ಪರಮಪೂಜ್ಯ ಶ್ರೀ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮಿಗಳು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ, ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ತೌಳವ ಸಹಕಾರಿ ಮಾಣಿಕ್ಯ, ತೌಳವ ಸಹಕಾರಿ ರತ್ನ, ತೌಳವ ಸಹಕಾರಿ ಸಿರಿ ಹಾಗೂ ತೌಳವ ಸಹಕಾರಿ ಸಾಧಕ ಪ್ರಶಸ್ತಿ–2026 ಪ್ರದಾನ ಮಾಡಿ ಸಹಕಾರಿ ಕ್ಷೇತ್ರದ ಸಾಧಕರನ್ನು ಗೌರವಿಸಲಾಗುವುದು.
ಇದರೊಂದಿಗೆ ರಾಜ್ಯಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಸಹಕಾರ ಕ್ಷೇತ್ರದ ಮಹತ್ವ, ಸಾಧನೆ ಮತ್ತು ಭವಿಷ್ಯದ ಅಭಿವೃದ್ಧಿಯನ್ನು ಬಿಂಬಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಶ್ರೀ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮಿಗಳು, ಸಹಕಾರ ತತ್ವವು ಸಮಾಜದಲ್ಲಿ ಒಗ್ಗಟ್ಟು, ಪರಸ್ಪರ ವಿಶ್ವಾಸ, ಸಹಬಾಳ್ವೆ ಹಾಗೂ ಆರ್ಥಿಕ ಪ್ರಗತಿಗೆ ಭದ್ರ ಬುನಾದಿಯಾಗಿದೆ. ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಇಂತಹ ಕಾರ್ಯಕ್ರಮಗಳು ಇತರರಿಗೂ ಪ್ರೇರಣೆಯಾಗುವುದರೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತವೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವ ತುಳುನಾಡ ರಕ್ಷಣಾ ವೇದಿಕೆ ಹಾಗೂ ತುಳುನಾಡ ಸೂರ್ಯ ಪತ್ರಿಕೆಯ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರ ಸಾಮಾಜಿಕ ಕಳಕಳಿ, ಸಮಾಜಮುಖಿ ಚಿಂತನೆ, ಸಂಘಟನಾ ಸಾಮರ್ಥ್ಯ ಹಾಗೂ ತುಳುನಾಡಿನ ಭಾಷೆ, ನೆಲ, ಜಲ, ಸಂಸ್ಕೃತಿ ಮತ್ತು ಜನರ ಹಕ್ಕುಗಳ ರಕ್ಷಣೆಗಾಗಿ ಅವರು ನಡೆಸುತ್ತಿರುವ ನಿರಂತರ ಹೋರಾಟದ ಕುರಿತು ಸ್ವಾಮೀಜಿಗಳು ಹೃದಯಸ್ಪರ್ಶಿ ಮೆಚ್ಚುಗೆಯ ಮಾತುಗಳನ್ನಾಡಿದರು. ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುತ್ತಾ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರ ಸೇವೆ ಮುಂದುವರಿಯಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸಹಕಾರ ಸಪ್ತಾಹ ಸ್ವಾಗತ ಸಮಿತಿಯ ಪ್ರಮುಖರಾದ ಚಂದ್ರಶೇಖರ ಉಚ್ಚಿಲ್, ಆನಂದ ಶೆಟ್ಟಿ ತೊಕ್ಕೊಟ್ಟು, ಅನಿಲ್ ಕುಂಪಲ, ಗೋಪಿನಾಥ್ ಬಗಂಬಿಲ, ಭಾಸ್ಕರ್ ಬೂಡುಮನೆ, ಸದಾಶಿವ ಆಚಾರ್ಯ, ಧೀರಜ್ ಗಣೇಶ್, ರೇಖಾ, ಶರ್ಮಿಳಾ, ಲತಾ ಗಟ್ಟಿ, ಜಯಂತಿ, ಯಶವಂತ ಆಳ್ವ, ರಕ್ಷಣ್, ಪ್ರಿಯಾ ಧೀರಜ್, ಪ್ರಕಾಶ್ ಕಿನ್ಯ, ಅಮಿತ್, ಅಶ್ವಿನ್, ಬಬಿತಾ, ಅನಿತಾ ಕೊಂಡಾಣ ಮತ್ತಿತರರು ಉಪಸ್ಥಿತರಿದ್ದರು.
ಸಹಕಾರ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಯುವಜನರಲ್ಲಿ ಸಹಕಾರ ಮನೋಭಾವ ಬೆಳೆಸುವ ಆಶಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಹಕಾರಿ ಕ್ಷೇತ್ರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ..

ಆನಂದ ಶೆಟ್ಟಿ ತೊಕ್ಕೊಟ್ಟು, ಅನಿಲ್ ಕುಂಪಲ, ಗೋಪಿನಾಥ್ ಬಗಂಬಿಲ, ಭಾಸ್ಕರ್ ಬೂಡುಮನೆ, ಸದಾಶಿವ ಆಚಾರ್ಯ, ಧೀರಜ್ ಗಣೇಶ್, ರೇಖಾ, ಶರ್ಮಿಳಾ, ಲತಾ ಗಟ್ಟಿ, ಜಯಂತಿ, ಯಶವಂತ ಆಳ್ವ, ರಕ್ಷಣ್, ಪ್ರಿಯಾ ಧೀರಜ್, ಪ್ರಕಾಶ್ ಕಿನ್ಯ, ಅಮಿತ್, ಅಶ್ವಿನ್, ಬಬಿತಾ, ಅನಿತಾ ಕೊಂಡಾಣ ಮತ್ತಿತರರು ಉಪಸ್ಥಿತರಿದ್ದರು.

.

