ಉಡುಪಿ, ನ.4: ಬ್ರಹ್ಮಾವರ ತಾಲೂಕಿನ ಫಿಶ್ ಫ್ಯಾಕ್ಟರಿಯೊಂದರಲ್ಲಿ ಅಕ್ಕಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಶಿಕ್ಷಣದಿಂದ ವಂಚಿತರಾಗಿ ಶಾಲೆಗೆ ತೆರಳದೆ ಇದ್ದ 30 ಮಕ್ಕಳನ್ನು ರಕ್ಷಿಸಲಾಗಿದೆ.
ಸಿಆರ್ಪಿ ಹಾಗೂ ಇಸಿಒ ಇಲಾಖೆಯ ಸಹಯೋಗದೊಂದಿಗೆ ಅಕ್ಕಪಡೆಯ ಅಧಿಕಾರಿಗಳು ಫಿಶ್ ಫ್ಯಾಕ್ಟರಿ ಮೇಲೆ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ 6 ವರ್ಷ ಮೇಲ್ಪಟ್ಟು ಹಾಗೂ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪತ್ತೆಯಾಗಿದ್ದಾರೆ. ಮಕ್ಕಳು ಶಾಲಾ ಶಿಕ್ಷಣದಿಂದ ದೂರ ಉಳಿದು ಫ್ಯಾಕ್ಟರಿಯ ಸುತ್ತಮುತ್ತ ಕಾಲ ಕಳೆಯುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದಾರೆ. ರಕ್ಷಿಸಲಾದ ಒಟ್ಟು 30 ಮಕ್ಕಳಲ್ಲಿ 7 ಬಾಲಕಿಯರನ್ನು ಬಾಲಕಿಯರ ಬಾಲಮಂದಿರಕ್ಕೆ ಹಾಗೂ 23 ಬಾಲಕರನ್ನು ಬಾಲಕರ ಬಾಲಮಂದಿರಕ್ಕೆ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಮಕ್ಕಳ ಶಿಕ್ಷಣ, ಸುರಕ್ಷತೆ ಮತ್ತು ಭವಿಷ್ಯದ ದೃಷ್ಟಿಯಿಂದ ಈ ಕಾರ್ಯಾಚರಣೆ ಮಹತ್ವ ಪಡೆದಿದೆ. ಶಿಕ್ಷಣದ ಹಕ್ಕಿನಿಂದ ವಂಚಿತರಾಗಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಸೂಕ್ತ ರಕ್ಷಣೆ ಹಾಗೂ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಮುಂದಿನ ಕ್ರಮ ಕೈಗೊಳ್ಳಲಿವೆ.
ಮಕ್ಕಳ ಬಾಲ್ಯ ಮತ್ತು ಶಿಕ್ಷಣದ ಹಕ್ಕನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಚರಣೆಗಳು ಅತ್ಯಂತ ಅಗತ್ಯವಾಗಿವೆ.

