ಚಲೋ ದೆಹಲಿ – ಚಲೋ ಜಂತರ್ ಮಂತರ್; ರಾಜ್ಯದ ಎಲ್ಲಾ ಚಾಲಕರು, ಕಾರ್ಮಿಕ ಸಂಘಟನೆಗಳ ಮುಖಂಡರಿಗೆ ಭಾಗವಹಿಸಲು ಮನವಿ
ಸುರತ್ಕಲ್: ಭಾರತೀಯ ಮಜ್ದೂರ್ ಸಂಘ (BMS) ಹಾಗೂ ಭಾರತೀಯ ಪ್ರೈವೇಟ್ ಟ್ರಾನ್ಸ್ಪೋರ್ಟ್ ಮಜ್ದೂರ್ ಮಹಾಸಂಘ (BPTMM) ನೇತೃತ್ವದಲ್ಲಿ ದೇಶಾದ್ಯಂತ ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಚಾಲಕರು, ಆಟೋರಿಕ್ಷಾ ಚಾಲಕರು ಹಾಗೂ ಸಾರಿಗೆ ಕಾರ್ಮಿಕರ ವಿವಿಧ ಹಕ್ಕುಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ನವೆಂಬರ್ 19, 2026ರಂದು ನವದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಮಹಾಧರಣಿ ಹಮ್ಮಿಕೊಳ್ಳಲಾಗಿದೆ.
ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಚಾಲಕರು ಮತ್ತು ಕಾರ್ಮಿಕರಿಗೆ ನ್ಯಾಯಯುತ ಹಕ್ಕುಗಳು, ಸಾಮಾಜಿಕ ಭದ್ರತೆ ಹಾಗೂ ಕಾರ್ಮಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಮಹಾಧರಣಿ ಆಯೋಜಿಸಲಾಗಿದೆ.
‘ಚಲೋ ದೆಹಲಿ – ಚಲೋ ಜಂತರ್ ಮಂತರ್’ ಎಂಬ ಕರೆಯೊಂದಿಗೆ ನಡೆಯಲಿರುವ ಈ ಹೋರಾಟದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಚಾಲಕರ ಸಂಘಗಳು, ಕಾರ್ಮಿಕ ಸಂಘಟನೆಗಳು, ವಿವಿಧ ಅಸೋಸಿಯೇಷನ್ಗಳ ನಾಯಕರು, ಪದಾಧಿಕಾರಿಗಳು ಹಾಗೂ ಚಾಲಕ ಸಹೋದರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಈ ಮಹಾಧರಣಿಯ ಪೂರ್ವಭಾವಿ ಸಭೆಯು ಸುರತ್ಕಲ್ನ ಬಿಎಂಎಸ್ ಆಟೋರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಕಾನೂನು ಸಲಹೆಗಾರರಾದ ನ್ಯಾಯವಾದಿ ಸುಜಯ್ ಶೆಟ್ಟಿ, ಸಂಘದ ಅಧ್ಯಕ್ಷ ರಮೇಶ್ ಟಿ. ಸುವರ್ಣ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ದೆಹಲಿಯಲ್ಲಿ ನಡೆಯಲಿರುವ ಮಹಾಧರಣಿಯ ಉದ್ದೇಶ, ಸಂಘಟನಾತ್ಮಕ ಸಿದ್ಧತೆ ಹಾಗೂ ರಾಜ್ಯದ ವಿವಿಧ ಚಾಲಕ ಸಂಘಟನೆಗಳ ಭಾಗವಹಿಸುವಿಕೆಯ ಕುರಿತು ಚರ್ಚಿಸಿದರು.
ಖಾಸಗಿ ಸಾರಿಗೆ ಕ್ಷೇತ್ರದ ಕಾರ್ಮಿಕರ ಧ್ವನಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸುವ ಉದ್ದೇಶದಿಂದ ನಡೆಯಲಿರುವ ಈ ಮಹಾಧರಣಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ನೀಡುವಂತೆ ಸಭೆಯಲ್ಲಿ ಕರೆ ನೀಡಲಾಯಿತು.
ಮಹಾಧರಣಿ ವಿವರ:
- ದಿನಾಂಕ: 19 ನವೆಂಬರ್ 2026
- ಸ್ಥಳ: ಜಂತರ್ ಮಂತರ್, ನವದೆಹಲಿ
- ನೇತೃತ್ವ: ಭಾರತೀಯ ಮಜ್ದೂರ್ ಸಂಘ (BMS) ಹಾಗೂ ಭಾರತೀಯ ಪ್ರೈವೇಟ್ ಟ್ರಾನ್ಸ್ಪೋರ್ಟ್ ಮಜ್ದೂರ್ ಮಹಾಸಂಘ (BPTMM)
- ಘೋಷಣೆ: ಚಲೋ ದೆಹಲಿ – ಚಲೋ ಜಂತರ್ ಮಂತರ್!

