ಮಂಗಳೂರು, ಸೆ.28: ತುಳು ಭಾಷೆಗೆ ಕರ್ನಾಟಕದಲ್ಲಿ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ, ತುಳು ಭಾಷೆ, ಸಂಸ್ಕೃತಿ ಹಾಗೂ ತುಳುನಾಡಿನ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಹಾಗೂ ‘ತುಳುನಾಡ ಸಾರಥಿ’ ಖ್ಯಾತಿಯ ಯೋಗಿಶ್ ಶೆಟ್ಟಿ ಜಪ್ಪು ಅವರನ್ನು ಕಂಕನಾಡಿಯ ಎಂಪೋರಿಯಂ ಕಾಂಪ್ಲೆಕ್ಸ್ನಲ್ಲಿರುವ ದಾಸ್ ಪ್ರಮೋಶನ್ ಹೋಮ್ ನರ್ಸಿಂಗ್ ಕೇರ್ ಸಂಸ್ಥೆಯ ನೂತನ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಂಸ್ಥೆಯ ಮುಖ್ಯಸ್ಥ ಲಯನ್ ಅನಿಲ್ ದಾಸ್ ಅವರು ಯೋಗಿಶ್ ಶೆಟ್ಟಿ ಜಪ್ಪು ಅವರಿಗೆ ಮಾಲೆ ಹಾಕಿ, ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ತುಳು ಭಾಷೆಯ ಮಾನ್ಯತೆ, ತುಳುನಾಡಿನ ಭಾಷೆ–ಸಂಸ್ಕೃತಿ ಸಂರಕ್ಷಣೆ, ಸಂಘಟನೆಯ ಚಟುವಟಿಕೆಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಸುದೀರ್ಘವಾಗಿ ಸಮಾಲೋಚನೆ ನಡೆಯಿತು.
ತುಳು ಭಾಷೆ ಹಾಗೂ ತುಳುನಾಡಿನ ಹಿತಾಸಕ್ತಿಗಾಗಿ 2009ರಲ್ಲಿ ತುಳುನಾಡ ರಕ್ಷಣಾ ವೇದಿಕೆ ಎಂಬ ಸಾಮಾಜಿಕ ಹೋರಾಟ ಸಂಘಟನೆ ಸ್ಥಾಪಿಸಿ, ಕಳೆದ ಹಲವು ವರ್ಷಗಳಿಂದ ದೇಶ–ವಿದೇಶಗಳಲ್ಲಿ ಸಂಘಟನೆಯ ಮೂಲಕ ತುಳು ನಾಡು,ನುಡಿ,ಅಭಿವ್ರದ್ದಿ ಕುರಿತು ಜನಜಾಗೃತಿ ಮೂಡಿಸುತ್ತಾ ಬಂದಿರುವ ಯೋಗಿಶ್ ಶೆಟ್ಟಿ ಜಪ್ಪು ಅವರ ಸೇವೆಯನ್ನು ಲಯನ್ ಅನಿಲ್ ದಾಸ್ ಅವರು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗಿಶ್ ಶೆಟ್ಟಿ ಜಪ್ಪು, ಲಯನ್ ಅನಿಲ್ ದಾಸ್ ಅವರ ಸಮಾಜಮುಖಿ ಸೇವಾ ಕಾರ್ಯಗಳು ಹಾಗೂ ಜನರಿಗೆ ನೆರವಾಗುವ ಉದ್ದೇಶದಿಂದ ನಡೆಸುತ್ತಿರುವ ದಾಸ್ ಪ್ರಮೋಶನ್ ಹೋಮ್ ನರ್ಸಿಂಗ್ ಕೇರ್ ಸಂಸ್ಥೆಯ ಸೇವೆಯನ್ನು ಪ್ರಶಂಸಿಸಿದರು. ಸಮಾಜದ ವಿವಿಧ ವರ್ಗಗಳ ಜನರಿಗೆ ಅಗತ್ಯವಿರುವ ಸಂದರ್ಭದಲ್ಲಿ ನೆರವು ನೀಡುವ ಇಂತಹ ಸೇವಾ ಮನೋಭಾವಗಳು ಸಮಾಜದಲ್ಲಿ ಮತ್ತಷ್ಟು ವಿಸ್ತರಿಸಬೇಕಾಗಿದೆ ಎಂದು ಅವರು ಹೇಳಿದರು.
ತುಳು ಭಾಷೆಗೆ ದೊರೆತಿರುವ ಮಾನ್ಯತೆಯನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಅದರ ಸಮರ್ಪಕ ಅನುಷ್ಠಾನ, ತುಳು ಭಾಷೆಯ ಬೆಳವಣಿಗೆ ಹಾಗೂ ಮುಂದಿನ ಪೀಳಿಗೆಗೆ ತುಳು ಭಾಷೆ–ಸಂಸ್ಕೃತಿಯನ್ನು ತಲುಪಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

