ಮಂಗಳೂರು, ಸೆ.27: ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ತೌಳವ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ತುಳುನಾಡಿನ ಹೊರರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತುಳು ಸೇವಾ ಸಂಘ-ಸಂಸ್ಥೆಗಳ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ತುಳು ಭಾಷೆಗೆ ದೊರೆತಿರುವ ಐತಿಹಾಸಿಕ ಮಾನ್ಯತೆಯ ಸಂದರ್ಭದಲ್ಲಿ ಹಲವು ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಈ ಸಂಘ-ಸಂಸ್ಥೆಗಳು ಹಾಗೂ ತುಳುಪರ ಹೋರಾಟಗಾರರ ಕೊಡುಗೆಯನ್ನು ಗೌರವದಿಂದ ಸ್ಮರಿಸಬೇಕಾಗಿದೆ ಎಂದು ನಮ್ಮೂರ ಆಟ ಕೂಟ ಟ್ರಸ್ಟ್ (ರಿ.), ಮಂಗಳೂರು ಸ್ಥಾಪಕಾಧ್ಯಕ್ಷ ಮುಲ್ಕಿ ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.
ತುಳುನಾಡಿನ ಜನರು ಉದ್ಯೋಗ, ವ್ಯಾಪಾರ, ವೃತ್ತಿ ಹಾಗೂ ವಿವಿಧ ಕಾರಣಗಳಿಂದ ದೇಶದ ಹಲವು ರಾಜ್ಯಗಳಿಗೆ ಮತ್ತು ವಿದೇಶಗಳಿಗೆ ತೆರಳಿ ನೆಲೆಸಿದ್ದರೂ, ತಮ್ಮ ಜನ್ಮಭೂಮಿಯ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಕರ್ಮಭೂಮಿಯಲ್ಲಿಯೂ ಉಳಿಸಿ ಬೆಳೆಸುವ ಮಹತ್ವದ ಕಾರ್ಯವನ್ನು ಮುಂದುವರಿಸಿದ್ದಾರೆ. ಇದರ ಫಲವಾಗಿ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ದುಬೈ, ಅಬುಧಾಬಿ ಸೇರಿದಂತೆ ವಿದೇಶಗಳಲ್ಲಿ ಹಲವು ತುಳು ಸೇವಾ ಸಂಘ-ಸಂಸ್ಥೆಗಳು ಸ್ಥಾಪನೆಯಾಗಿ, ದಶಕಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ತುಳು ಭಾಷೆಗೆ ಮಾನ್ಯತೆ ದೊರೆತಿರುವ ಈ ಸಂದರ್ಭದಲ್ಲಿ ಕೇವಲ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುವುದಷ್ಟೇ ಅಲ್ಲದೆ, ಈ ಸಾಧನೆಯ ಹಿಂದೆ ಹಲವು ದಶಕಗಳಿಂದ ನಡೆದ ಸಂಘಟಿತ ಪ್ರಯತ್ನಗಳು, ಹೋರಾಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜನಜಾಗೃತಿ ಕಾರ್ಯಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮುಲ್ಕಿ ಕರುಣಾಕರ ಶೆಟ್ಟಿ ಅಭಿಪ್ರಾಯಪಟ್ಟರು.
ತುಳು ಭಾಷೆಯ ಮಾನ್ಯತೆಗಾಗಿ ನಡೆದ ಹೋರಾಟದಲ್ಲಿ ಅಖಿಲ ಭಾರತ ತುಳು ಒಕ್ಕೂಟ್ಟದ ಸದಸ್ಯತ್ವ ಹೊಂದಿದ 48ಕ್ಕೂ ಹೆಚ್ಚು ತುಳು ಸೇವಾ ಸಂಘ-ಸಂಸ್ಥೆಗಳ ನಿರಂತರ
ಮಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಸಂಘ-ಸಂಸ್ಥೆಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಯಕ್ಷಗಾನ, ನಾಟಕ, ಜಾನಪದ ಹಾಗೂ ತೌಳವ ಪರಂಪರೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿವೆ.
ತುಳು ಭಾಷೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ತುಳು ಕಲಿಕೆ ಮತ್ತು ಬಳಕೆಗೆ ಉತ್ತೇಜನ ನೀಡುವುದು, ತುಳು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ಸರ್ಕಾರದ ಗಮನವನ್ನು ತುಳು ಭಾಷೆಯ ಬೇಡಿಕೆಯತ್ತ ಸೆಳೆಯುವುದು ಸೇರಿದಂತೆ ಹಲವು ರೀತಿಯಲ್ಲಿ ಈ ಸಂಘ-ಸಂಸ್ಥೆಗಳು ಸೇವೆ ಸಲ್ಲಿಸಿವೆ. ಹಲವು ಸಂದರ್ಭಗಳಲ್ಲಿ ಒಗ್ಗಟ್ಟಿನಿಂದ ಧ್ವನಿ ಎತ್ತುವ ಮೂಲಕ ತುಳು ಭಾಷೆಯ ಬೇಡಿಕೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸುವ ಕೆಲಸವೂ ನಡೆದಿದೆ ಎಂದು ಅವರು ತಿಳಿಸಿದರು.
ಮಹಾರಾಷ್ಟ್ರದಲ್ಲೂ ತುಳುವಿನ ಸೇವೆಗೆ ದಶಕಗಳ ಇತಿಹಾಸ
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ದುಬೈ–ಅಬುಧಾಬಿ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ತುಳು ಸಂಘ-ಸಂಸ್ಥೆಗಳು ತುಳು ಭಾಷೆಯ ಬೆಳವಣಿಗೆ ಮತ್ತು ಮಾನ್ಯತೆಗಾಗಿ ತಮ್ಮದೇ ಆದ ರೀತಿಯಲ್ಲಿ ನಿರಂತರವಾಗಿ ಶ್ರಮಿಸುತ್ತಿವೆ.
ಈ ಪೈಕಿ ಮಹಾರಾಷ್ಟ್ರದ ಮೀರಜ್ ತುಳುನಾಡ ಸಂಘದ ಸೇವೆಯನ್ನು ವಿಶೇಷವಾಗಿ ಸ್ಮರಿಸಬೇಕಾಗಿದೆ. ಹಲವು ವರ್ಷಗಳ ಹಿಂದೆ ಮೀರಜ್ನಲ್ಲಿ ಜಾತಿ, ಧರ್ಮ ಹಾಗೂ ಭೇದಭಾವವಿಲ್ಲದೆ ತುಳುವರನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಸಂಘಟನೆ ಸ್ಥಾಪನೆಯಾಯಿತು. ತುಳು ಭಾಷೆ ಮತ್ತು ತೌಳವ ಸಂಸ್ಕೃತಿಯ ಉಳಿವಿನೊಂದಿಗೆ ಸಮಾಜಮುಖಿ ಚಟುವಟಿಕೆಗಳಿಗೂ ಸಂಘಟನೆ ಆದ್ಯತೆ ನೀಡುತ್ತಾ ಬಂದಿದೆ.
ಮೀರಜ್ ತುಳುನಾಡ ಸಂಘದ ಪ್ರಯತ್ನದ ಫಲವಾಗಿ ದೇಶದಲ್ಲಿಯೇ ಪ್ರಥಮ ಕರ್ನಾಟಕ ತುಳುನಾಡ ಭವನ ನಿರ್ಮಾಣವಾಗಿದ್ದು ಸಾಂಗ್ಲಿ ಮೀರಾಜ್ ರಾಜ ರಸ್ತೆಯಲ್ಲಿ ರರಾಜಿಸುತ್ತಿದೆ. ಇದು ಹೊರರಾಜ್ಯದಲ್ಲಿ ನೆಲೆಸಿರುವ ತುಳುವರ ಸಂಘಟನಾ ಶಕ್ತಿ ಹಾಗೂ ತಾಯ್ನಾಡಿನ ಭಾಷೆ–ಸಂಸ್ಕೃತಿಯ ಮೇಲಿನ ಬದ್ಧತೆಗೆ ಒಂದು ಪ್ರಮುಖ ಉದಾಹರಣೆಯಾಗಿದೆ ಎಂದು ಮುಲ್ಕಿ ಕರುಣಾಕರ ಶೆಟ್ಟಿ ಹೇಳಿದರು.
ಮೀರಜ್ ತುಳುನಾಡ ಸಂಘದ ಸ್ಥಾಪನೆಯಲ್ಲಿ ಸಕ್ರಿಯ ಪಾತ್ರ
1983ರಿಂದ ಸುಮಾರು 14 ವರ್ಷಗಳ ಕಾಲ ಮೀರಜ್ ವಿಜಯ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮೀರಜ್ ತುಳುನಾಡ ಸಂಘದ ಸ್ಥಾಪನೆ ಹಾಗೂ ಅದರ ವಿವಿಧ ಚಟುವಟಿಕೆಗಳಲ್ಲಿ ತಾನು ಸಕ್ರಿಯವಾಗಿ ಭಾಗವಹಿಸಿದ್ದೇನೆ ಎಂದು ಮುಲ್ಕಿ ಕರುಣಾಕರ ಶೆಟ್ಟಿ ತಿಳಿಸಿದರು.
ಸಂಘಟನೆಯ ಸ್ಥಾಪನೆಯಿಂದ ಆರಂಭಿಸಿ ಜಾಗ ಖರೀದಿ, ಶಿಲಾನ್ಯಾಸ ಹಾಗೂ ಭವನ ನಿರ್ಮಾಣ ಮತ್ತು ಉದ್ಘಾಟನೆ ಸೇರಿದಂತೆ ವಿವಿಧ ಹಂತಗಳಲ್ಲಿ ಸಂಘದೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಿದ ಅನುಭವವಿದೆ. ಹೊರರಾಜ್ಯದಲ್ಲಿ ನೆಲೆಸಿದ್ದರೂ ತಾಯ್ನಾಡಿನ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ತುಳುವರು ಹೊಂದಿದ್ದ ಬದ್ಧತೆಯನ್ನು ಈ ಸಂಘಟನೆಯ ಕಾರ್ಯಚಟುವಟಿಕೆಗಳು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.
ಮುಂದಿನ ಪೀಳಿಗೆಗೆ ತುಳು ಪರಿಚಯಿಸುವ ಜವಾಬ್ದಾರಿ
ತುಳು ಭಾಷೆಗೆ ದೊರೆತಿರುವ ಮಾನ್ಯತೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ತುಳುವರೆಲ್ಲರ ಮೇಲಿದೆ. ಸರ್ಕಾರದ ಮಟ್ಟದಲ್ಲಿ ದೊರೆತಿರುವ ಮಾನ್ಯತೆ ಪರಿಣಾಮಕಾರಿಯಾಗಿ ಜಾರಿಯಾಗುವುದರ ಜೊತೆಗೆ, ಮನೆ, ಶಾಲೆ, ಸಂಘ-ಸಂಸ್ಥೆಗಳು ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆಗಳಲ್ಲಿ ತುಳು ಭಾಷೆಯ ಬಳಕೆ ಹೆಚ್ಚಾಗಬೇಕು ಎಂದು ಮುಲ್ಕಿ ಕರುಣಾಕರ ಶೆಟ್ಟಿ ಹೇಳಿದರು.
ಹೊರರಾಜ್ಯಗಳಲ್ಲಿ ನೆಲೆಸಿರುವ ತುಳುವರು ತಮ್ಮ ಮಕ್ಕಳಿಗೆ ತುಳು ಭಾಷೆ, ತೌಳವ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯ ಪರಿಚಯ ಮಾಡಿಸುವ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬೇಕು. ತುಳು ಭಾಷೆಯ ಬೆಳವಣಿಗೆಗೆ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಯುವಜನತೆಯ ಪಾಲ್ಗೊಳ್ಳುವಿಕೆಯೂ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ತುಳುಪರ ಹೋರಾಟಗಾರರ ಸೇವೆ ಸ್ಮರಣೀಯ
ತುಳು ಭಾಷೆಗೆ ದೊರೆತಿರುವ ಮಾನ್ಯತೆಗಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದರ ಜೊತೆಗೆ, ಈ ಐತಿಹಾಸಿಕ ಸಾಧನೆಗಾಗಿ ದಶಕಗಳಿಂದ ಹೋರಾಟ ನಡೆಸಿದ ಸಂಘ-ಸಂಸ್ಥೆಗಳು, ಸಾಹಿತಿಗಳು, ಕಲಾವಿದರು, ಸಂಶೋಧಕರು, ಸಂಘಟಕರು ಹಾಗೂ ತುಳುಪರ ಹೋರಾಟಗಾರರ ಸೇವೆಯನ್ನು ಸ್ಮರಿಸುವುದು ಅತ್ಯಗತ್ಯ.
ತುಳು ಭಾಷೆಯ ಬೆಳವಣಿಗೆಗಾಗಿ ತಮ್ಮ ವೈಯಕ್ತಿಕ ಸಮಯ, ಸಂಪನ್ಮೂಲ ಮತ್ತು ಶ್ರಮವನ್ನು ವಿನಿಯೋಗಿಸಿದ ಅನೇಕ ಮಂದಿ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವೆ ಸಲ್ಲಿಸಿದ್ದಾರೆ. ಅವರ ನಿರಂತರ ಪ್ರಯತ್ನಗಳ ಫಲವಾಗಿ ಇಂದು ತುಳು ಭಾಷೆಯ ವಿಚಾರವು ವ್ಯಾಪಕವಾಗಿ ಚರ್ಚೆಯಾಗುವ ಹಂತಕ್ಕೆ ಬಂದಿದೆ.
ಆದ್ದರಿಂದ ತುಳು ಭಾಷೆಗೆ ದೊರೆತಿರುವ ಮಾನ್ಯತೆಯನ್ನು ಒಬ್ಬರ ಅಥವಾ ಒಂದು ಸಂಘಟನೆಯ ಸಾಧನೆಯಾಗಿ ಪರಿಗಣಿಸದೆ, ಹಲವು ದಶಕಗಳ ಸಮೂಹ ಪ್ರಯತ್ನದ ಫಲವಾಗಿ ಗೌರವಿಸುವುದು ಸೂಕ್ತ. ತುಳು ಭಾಷೆ ಮತ್ತು ಸಂಸ್ಕೃತಿಯ ಉಳಿವು–ಬೆಳವಣಿಗೆಗಾಗಿ ಮುಂದೆಯೂ ಎಲ್ಲ ತುಳು ಸೇವಾ ಸಂಘ-ಸಂಸ್ಥೆಗಳು, ಸಂಘಟನೆಗಳು ಹಾಗೂ ತುಳುವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಮುಲ್ಕಿ ಕರುಣಾಕರ ಶೆಟ್ಟಿ ಕರೆ ನೀಡಿದರು.

– ಮುಲ್ಕಿ ಕರುಣಾಕರ ಶೆಟ್ಟಿ
ಸ್ಥಾಪಕಾಧ್ಯಕ್ಷರು,
ನಮ್ಮೂರ ಆಟ ಕೂಟ ಟ್ರಸ್ಟ್ (ರಿ.), ಮಂಗಳೂರು

