ಮಂಗಳೂರು: ಮುಂಬೈಯಲ್ಲಿ ಪ್ರಸಿದ್ಧ ಉದ್ಯಮಿಯಾಗಿ ಹಾಗೂ ಮಹಾರಾಷ್ಟ್ರದಲ್ಲಿ ಅತಿಥಿ ಸತ್ಕಾರ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಪಾದೆ ಅಜಿತ್ ರೈ ಅವರ ಸಾಧನೆ ಪ್ರಶಂಸನೀಯವಾಗಿದೆ ಎಂದು ಡಾ. ಅತ್ತೂರು ಸದಾನಂದ ಶೆಟ್ಟಿ ಅಭಿಪ್ರಾಯಪಟ್ಟರು.
ಕುಡ್ಲ ಫೆವಿಲಿಯನ್ ಸಭಾಂಗಣದಲ್ಲಿ ನಡೆದ ಹೋಟೆಲ್ ಕುಡ್ಲ ಸಮೂಹ ಸಂಸ್ಥೆಯ 52ನೇ ವರ್ಷದ ವಾರ್ಷಿಕ ಸಮಾರಂಭದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪಾದೆ ಅಜಿತ್ ರೈ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಅತಿಥಿ ಸತ್ಕಾರಕ್ಕೆ ಮರುಳಾಗದ ಜನರಿಲ್ಲ. ಅದಕ್ಕೆ ತನ್ನದೇ ಆದ ವಿಶೇಷತೆ ಇದೆ. ಅತಿಥಿ ಸತ್ಕಾರವು ಶ್ರೀಮಂತರಿಂದ ಹಿಡಿದು ಎಲ್ಲಾ ವರ್ಗದ ಜನರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ನಿಟ್ಟಿನಲ್ಲಿ ಪಾದೆ ಅಜಿತ್ ರೈ ಅವರ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಪಾದೆ ಅಜಿತ್ ರೈ ಅವರು, “ಬಾಲ್ಯದಿಂದಲೇ ನನಗೆ ಉಡುಗೆ-ತೊಡುಗೆ, ಬಂಧು-ಬಳಗ ಹಾಗೂ ಗೆಳೆಯರೊಂದಿಗೆ ಅತಿಥಿ ಸತ್ಕಾರ ಮಾಡುವ ಹವ್ಯಾಸ ಬೆಳೆದಿತ್ತು. ಇದನ್ನು ಸಂಘ-ಸಂಸ್ಥೆಗಳು ಗಮನಿಸಿ ನನ್ನನ್ನು ಗುರುತಿಸಿರುವುದು ಸಂತಸ ತಂದಿದೆ. ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಕಾರ್ಯಕ್ರಮಗಳು ವಿಶಿಷ್ಟ ರೀತಿಯಲ್ಲಿ ನಡೆಯುತ್ತಿದ್ದು, ಜನಮನ್ನಣೆ ಪಡೆಯುತ್ತಿವೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಡಾ. ಎ.ಜೆ. ಶೆಟ್ಟಿ ಮಾತನಾಡಿ, ದೀರ್ಘಕಾಲದಿಂದ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಡಾ. ಅತ್ತೂರು ಸದಾನಂದ ಶೆಟ್ಟಿ ಅವರ ನೇತೃತ್ವದಲ್ಲಿ ಸಾಮಾಜಿಕ, ಧಾರ್ಮಿಕ, ಕ್ರೀಡಾ, ಸಾಂಸ್ಕೃತಿಕ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ವಿಶೇಷ ಕೊಡುಗೆ ನೀಡುತ್ತಾ ಸಾರ್ವಜನಿಕವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.
ಸಂಘಟನಾ ಕಾರ್ಯದರ್ಶಿ ರಾಜ್ಗೋಪಾಲ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಸಮಾರಂಭದಲ್ಲಿ ನಿಧಿ ಸದಾನಂದ ಶೆಟ್ಟಿ, ಪ್ರಿಯಾಂಕ ನಿಧಿ ಶೆಟ್ಟಿ, ಮಾನ್ಯ ನಿವಾನ್ ಶೆಟ್ಟಿ, ನಿಕ್ಷೇಪ್ ಸದಾನಂದ ಶೆಟ್ಟಿ, ಡಾ. ನವೀನ್ಚಂದ್ರ ಶೆಟ್ಟಿ, ಡಾ. ರಣದೀಪ್ ಶೆಟ್ಟಿ, ರಂಜಿತ್ ಮಲ್ಲಿ, ಮೂಡ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಸಿರಾಜ್ ಅಹಮ್ಮದ್, ಡಾ. ಸತೀಶ್ ಭಂಡಾರಿ, ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ, ರತನ್ ಶೆಟ್ಟಿ, ಆರೂರು ಕಿಶೋರ್ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮೂಲ್ಕಿ ಕರುಣಾಕರ ಶೆಟ್ಟಿ.

