ಉಡುಪಿ: ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಕಾರ ರವಿಶಾಸ್ತ್ರಿ ಅವರು ಗುರುವಾರ ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದೇವರ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಮಠಕ್ಕೆ ಆಗಮಿಸಿದ ರವಿಶಾಸ್ತ್ರಿ ಅವರನ್ನು ಪರ್ಯಾಯ ಶ್ರೀ ಶೀರೂರು ಮಠದ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶ್ರೀಪಾದರು ಫಲ ಹಾಗೂ ಮಂತ್ರಾಕ್ಷತೆ ನೀಡಿ ರವಿಶಾಸ್ತ್ರಿ ಅವರಿಗೆ ಆಶೀರ್ವದಿಸಿದರು.
ಬಳಿಕ ರವಿಶಾಸ್ತ್ರಿ ಅವರು ಶ್ರೀಕೃಷ್ಣ ದೇವರ ದರ್ಶನ ಪಡೆದು, ಉಡುಪಿ ಶ್ರೀಕೃಷ್ಣ ಮಠದ ಧಾರ್ಮಿಕ ಪರಂಪರೆ, ಪೂಜಾ ವಿಧಿವಿಧಾನಗಳು ಹಾಗೂ ಮಠದ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದುಕೊಂಡರು. ಮಠದ ಆಧ್ಯಾತ್ಮಿಕ ವಾತಾವರಣವನ್ನು ವೀಕ್ಷಿಸಿದ ಅವರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಠದ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಸೇರಿದಂತೆ ಮಠದ ಸಿಬ್ಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು.

