ಬೆಂಗಳೂರು, ಸೆ.20: ರಾಜ್ಯ ಸರ್ಕಾರವು ತುಳು ಭಾಷೆಗೆ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವುದು ಕರಾವಳಿ ಭಾಗದ ಜನರ ದೀರ್ಘಕಾಲದ ಭಾಷಾ ಆಶಯಕ್ಕೆ ದೊರೆತ ಮಹತ್ವದ ಮಾನ್ಯತೆಯಾಗಿದೆ. ಇದು ಕೇವಲ ಸಾಂಸ್ಕೃತಿಕ ವಿಜಯವಲ್ಲ; ತುಳು ಭಾಷೆಯ ಅಸ್ಮಿತೆ, ಆಡಳಿತಾತ್ಮಕ ಒಳಗೊಳ್ಳುವಿಕೆ ಹಾಗೂ ಭಾಷೆಯ ಕಾನೂನಾತ್ಮಕ ಸ್ಥಾನಮಾನವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ತುಳು ಕೂಟ ಮೂಡಬಿದಿರೆ ಉಪಾಧ್ಯಕ್ಷೆ ಶ್ವೇತಾ ಜೈನ್ ತಿಳಿಸಿದ್ದಾರೆ.
ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸ, ವಿಶಿಷ್ಟ ಸಾಹಿತ್ಯ ಪರಂಪರೆ ಹಾಗೂ ಸಮೃದ್ಧ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವ ತುಳು ಭಾಷೆಗೆ ಸೂಕ್ತ ಮಾನ್ಯತೆ ದೊರಕಬೇಕೆಂಬುದು ಕರಾವಳಿಯ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ತುಳುಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಹಾಗೂ ಭಾಷಾಭಿಮಾನಿಗಳು ನಡೆಸಿಕೊಂಡು ಬಂದ ನಿರಂತರ ಹೋರಾಟ, ಜಾಗೃತಿ ಅಭಿಯಾನ ಮತ್ತು ಪ್ರಯತ್ನಗಳಿಗೆ ಇದೀಗ ಮಹತ್ವದ ಫಲ ದೊರೆತಿದೆ ಎಂದು ಅವರು ಹೇಳಿದರು.
ತುಳು ಭಾಷೆಯ ಮಾನ್ಯತೆಗಾಗಿ ಶ್ರಮಿಸಿದ ಪ್ರತಿಯೊಬ್ಬ ಹೋರಾಟಗಾರ, ಸಂಘಟನೆ, ಸಾಹಿತಿ, ಕಲಾವಿದ ಹಾಗೂ ಭಾಷಾಭಿಮಾನಿಗಳ ಕೊಡುಗೆ ಸ್ಮರಣೀಯವಾಗಿದೆ. ಸರ್ಕಾರದ ಈ ನಿರ್ಧಾರವು ತುಳು ಭಾಷೆಯ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆದಿದ್ದು, ಮುಂದಿನ ದಿನಗಳಲ್ಲಿ ಈ ಮಾನ್ಯತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಶ್ವೇತಾ ಜೈನ್ ಅಭಿಪ್ರಾಯಪಟ್ಟರು.
ಆಡಳಿತಾತ್ಮಕ ಬಳಕೆಯ ಜೊತೆಗೆ ಶಿಕ್ಷಣ, ಸಾಹಿತ್ಯ, ಸಂಶೋಧನೆ, ಅನುವಾದ, ಡಿಜಿಟಲ್ ತಂತ್ರಜ್ಞಾನ ಹಾಗೂ ಹೊಸ ಮಾಧ್ಯಮ ಕ್ಷೇತ್ರಗಳಲ್ಲಿ ತುಳು ಭಾಷೆಯ ಬಳಕೆಯನ್ನು ವಿಸ್ತರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ತುಳು ಭಾಷೆಯಲ್ಲಿ ಆಡಳಿತಾತ್ಮಕ ದಾಖಲೆಗಳು, ಸಾರ್ವಜನಿಕ ಸೇವೆಗಳು ಹಾಗೂ ಮಾಹಿತಿ ಲಭ್ಯವಾಗುವಂತೆ ಹಂತ ಹಂತವಾಗಿ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದರು.
ತುಳು ಭಾಷೆಯ ಮುಂದಿನ ಪ್ರಮುಖ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಗುರಿ ಭಾರತದ ಸಂವಿಧಾನದ ಎಂಟನೇ ಅನುಸೂಚಿಗೆ ತುಳುವನ್ನು ಸೇರಿಸುವುದು ಆಗಬೇಕು. ಎಂಟನೇ ಅನುಸೂಚಿಗೆ ಸೇರ್ಪಡೆಯಾದರೆ ತುಳು ಭಾಷೆಗೆ ರಾಷ್ಟ್ರೀಯ ಮಟ್ಟದಲ್ಲಿ ಸಂವಿಧಾನಾತ್ಮಕ ಮಾನ್ಯತೆ ದೊರೆಯುವ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಲಿದೆ. ಈ ಗುರಿ ಸಾಧನೆಗಾಗಿ ಕರ್ನಾಟಕ ಹಾಗೂ ಕೇರಳ ಸೇರಿದಂತೆ ತುಳು ಭಾಷಿಕ ಪ್ರದೇಶಗಳ ಜನಪ್ರತಿನಿಧಿಗಳು, ಸಂಘಟನೆಗಳು, ಸಾಹಿತಿಗಳು ಮತ್ತು ಭಾಷಾಭಿಮಾನಿಗಳು ಒಗ್ಗಟ್ಟಿನಿಂದ ಪ್ರಯತ್ನಿಸಬೇಕಾಗಿದೆ ಎಂದು ಶ್ವೇತಾ ಜೈನ್ ಹೇಳಿದರು.
ಸರಕಾರ ಶಾಲೆಗಳಲ್ಲಿ ತುಳು ಭಾಷಾ ಲಿಪಿಯನ್ನು ಜಾರಿಗೊಳಿಸುವ ಕ್ರಮ ಕೈ ಗೊಳ್ಳುವ ಅಗತ್ಯತೆ ಇದೆ.
“ಆಡಳಿತಾತ್ಮಕ ಮಾನ್ಯತೆ ತುಳು ಭಾಷೆಯ ಹೋರಾಟದ ಅಂತ್ಯವಲ್ಲ; ಅದು ಹೊಸ ಅಧ್ಯಾಯದ ಆರಂಭ. ತುಳುವಿನ ಸಂರಕ್ಷಣೆ, ಅಭಿವೃದ್ಧಿ ಮತ್ತು ರಾಷ್ಟ್ರೀಯ ಮಟ್ಟದ ಸಂವಿಧಾನಾತ್ಮಕ ಮಾನ್ಯತೆಗಾಗಿ ಮುಂದಿನ ಪೀಳಿಗೆಯೊಂದಿಗೆ ಮತ್ತಷ್ಟು ಸಂಘಟಿತ ಪ್ರಯತ್ನ ಅಗತ್ಯ” ಎಂದು ಅವರು ತಿಳಿಸಿದರು.

