ಉಡುಪಿ: ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಗಿ ಅಥವಾ ಅನುಮತಿ ಪಡೆಯದೆ ಸರಕಾರಿ ಜಮೀನಿನಲ್ಲಿ ಸ್ಫೋಟಕ ವಸ್ತುಗಳನ್ನು ಅನಧಿಕೃತವಾಗಿ ಬಳಸಿ ಬಂಡೆ ಕಲ್ಲುಗಳನ್ನು ಸ್ಫೋಟಿಸಿದ ಆರೋಪದ ಮೇರೆಗೆ ಮಣಿಪಾಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕಿಪಲ್ಕೆ, ಸರ್ವೆ ನಂ.112/2ರ 1.54 ಎಕರೆ ವಿಸ್ತೀರ್ಣದ ಸರಕಾರಿ ಸ್ಥಿರಾಸ್ತಿ ಜಮೀನಿನಲ್ಲಿ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಠಾಣೆಯ ಪಿಎಸ್ಐ ತಿಮ್ಮೇಶ್ ಬಿ.ಎನ್. ಅವರು ತನಿಖೆ ಕೈಗೊಂಡಿದ್ದು, ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕೆ. ಗೋವಿಂದರಾಜ್ (40) ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಣಕರ್ಚಿ ಗ್ರಾಮದ ಶೇಖಪ್ಪ ಚಲವಾದಿ ಅಲಿಯಾಸ್ ಚಂದ್ರು (28) ಅವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಡ್ರಿಲ್ಲಿಂಗ್ ಕಂಪ್ರೆಸರ್ ಯಂತ್ರ ಅಳವಡಿಸಿರುವ ಮಹೀಂದ್ರ ಟ್ರ್ಯಾಕ್ಟರ್ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

