ಮಂಗಳೂರು, ಸೆ.2: ಶಾಲಾ ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಮಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ಶಾಲಾ ಬಸ್ ಸುರಕ್ಷತೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಬುಧವಾರ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ನಗರದ ವಿವಿಧ ಶಾಲೆಗಳ ಶಾಲಾ ಬಸ್ ಚಾಲಕರು, ವಾಹನ ಮಾಲಕರು, ಬಸ್ ಮ್ಯಾನೇಜರ್ಗಳು ಹಾಗೂ ಶಾಲಾ ಆಡಳಿತ ಮಂಡಳಿಯ ಪ್ರತಿನಿಧಿಗಳು ಸೇರಿದಂತೆ ಸುಮಾರು 600 ಮಂದಿ ಭಾಗವಹಿಸಿದ್ದರು.
ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ನಿಟ್ಟಿನಲ್ಲಿ ಶಾಲಾ ಬಸ್ ಚಾಲಕರು ಹಾಗೂ ನಿರ್ವಾಹಕರು ಕಡ್ಡಾಯವಾಗಿ ಪಾಲಿಸಬೇಕಾದ ಕಾನೂನು ನಿಯಮಗಳು, ರಸ್ತೆ ಸುರಕ್ಷತಾ ಕ್ರಮಗಳು, ಸಂಚಾರ ನಿಯಮಗಳು ಹಾಗೂ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಕಾರ್ಯಕ್ರಮದಲ್ಲಿ ಸಮಗ್ರವಾಗಿ ಮಾಹಿತಿ ನೀಡಲಾಯಿತು.
ಶಾಲಾ ಆಡಳಿತ ಮಂಡಳಿಗಳು ಶಾಲಾ ವಾಹನಗಳಿಗೆ ಸಂಬಂಧಿಸಿದ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ, ಚಾಲಕರು ಮತ್ತು ನಿರ್ವಾಹಕರ ಕರ್ತವ್ಯಗಳನ್ನು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡಬೇಕು. ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸಿದರು. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಶಾಲಾ ಬಸ್ ಚಾಲಕರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಕಾರ್ಯಕ್ರಮದ ಸಂದರ್ಭದಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆ ಕುರಿತು ಭಾಗವಹಿಸಿದವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ
ಕಾರ್ಯಕ್ರಮದಲ್ಲಿ ಡಿ.ಸಿ.ಪಿ. (ಅಪರಾಧ ಮತ್ತು ಸಂಚಾರ) ಮಾತನಾಡಿ, Karnataka Motor Vehicles (Conditions for Vehicle Engaged in Transport of School Children) Rules, 2012 ಅನ್ವಯ ಶಾಲಾ ವಾಹನಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು.
ಶಾಲೆ ಮತ್ತು ಕಾಲೇಜುಗಳ School Cab Safety Committee ವತಿಯಿಂದ ಶಾಲಾ ವಾಹನ ಹಾಗೂ ಚಾಲಕರ ನೈಜ ದಾಖಲೆಗಳು, ವಾಹನದ ಫಿಟ್ನೆಸ್ ಪ್ರಮಾಣಪತ್ರ, ವಿಮೆ, ಅಗ್ನಿಶಾಮಕ ಉಪಕರಣ, ಸ್ಪೀಡ್ ಗವರ್ನರ್ ಸೇರಿದಂತೆ ಅಗತ್ಯ ಸುರಕ್ಷತಾ ಅಂಶಗಳನ್ನು ಪರಿಶೀಲಿಸಬೇಕು. ಶಾಲಾ ವಾಹನಗಳು Closed Body ಹೊಂದಿರುವುದರ ಜೊತೆಗೆ, ಗರಿಷ್ಠ 40 ಕಿ.ಮೀ. ವೇಗದ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಯಿತು.
ಪರ್ಮಿಟ್ ಇರುವ ವಾಹನಗಳ ಬಳಕೆಗೆ ಸೂಚನೆ
ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಮಾತನಾಡಿ, ಶಾಲಾ ಮಕ್ಕಳನ್ನು ಸಾಗಿಸಲು ಮಾನ್ಯ ಪರ್ಮಿಟ್ ಹೊಂದಿರುವ ವಾಹನಗಳನ್ನು ಮಾತ್ರ ಬಳಸಬೇಕು. ವಾಹನಗಳ ದಾಖಲೆಗಳು ಹಾಗೂ ಅಗತ್ಯ ಸುರಕ್ಷತಾ ಮಾನದಂಡಗಳನ್ನು ಸಮರ್ಪಕವಾಗಿ ಪಾಲಿಸುವ ಮೂಲಕ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪೋಷಕರ ಸಭೆ ನಡೆಸಿ ಸುರಕ್ಷತೆ ಕುರಿತು ಚರ್ಚಿಸಿ
ಶಿಕ್ಷಣಾಧಿಕಾರಿಗಳು ಶಾಲಾ ಆಡಳಿತ ಮಂಡಳಿಗಳಿಗೆ ಮಕ್ಕಳ ಸುರಕ್ಷತೆ ಕುರಿತು ನಿರಂತರ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು. ಶಿಕ್ಷಕರು, ಶಾಲಾ ಬಸ್ ಮಾಲಕರು ಹಾಗೂ ಚಾಲಕರು ಮತ್ತು ಪೋಷಕರ ಸಭೆಗಳನ್ನು ಆಗಾಗ್ಗೆ ನಡೆಸಿ, ಶಾಲಾ ವಾಹನಗಳ ಸುರಕ್ಷತೆ ಹಾಗೂ ಮಕ್ಕಳ ಪ್ರಯಾಣದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಿಸ್ತು ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲು ಕರೆ
ಎ.ಸಿ.ಪಿ. ಸಂಚಾರ ಉಪವಿಭಾಗದವರು ಮಾತನಾಡಿ, ಶಾಲಾ ಬಸ್ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಶಿಸ್ತು, ಜವಾಬ್ದಾರಿ ಮತ್ತು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಮಕ್ಕಳ ಸುರಕ್ಷತೆಯನ್ನು ತಮ್ಮ ಪ್ರಮುಖ ಕರ್ತವ್ಯವೆಂದು ಪರಿಗಣಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ನಗರ ಸಂಚಾರ ಪೊಲೀಸ್ ಠಾಣೆಗಳ ಎಲ್ಲಾ ಠಾಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

