ಉಡುಪಿ: ಮಲ್ಪೆ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಮೀನುಗಾರಿಕಾ ಬೋಟೊಂದರ ಕ್ಯಾಬಿನ್ನಲ್ಲಿ ಮೀನುಗಾರ ಕಾರ್ಮಿಕರಿಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಚೂರಿ ಇರಿತಕ್ಕೊಳಗಾದ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಮೃತರನ್ನು ಚಿಕ್ಕಮಗಳೂರು ಮೂಲದ ಅಭಿಷೇಕ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದ ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ಬೋಟಿನಲ್ಲಿ ಗೋವಿಂದ ಹಾಗೂ ಅಭಿಷೇಕ್ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರ ಮುಂದುವರಿದು ಮಂಗಳವಾರ ಬೆಳಗಿನ ಜಾವ ಇಬ್ಬರ ನಡುವೆ ಮತ್ತೆ ಸಂಘರ್ಷ ಉಂಟಾಗಿದ್ದು, ಈ ವೇಳೆ ಗೋವಿಂದ ಅಭಿಷೇಕ್ಗೆ ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಅಭಿಷೇಕ್ ಮೃತಪಟ್ಟ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಮಲ್ಪೆ ಪೊಲೀಸ್ ಠಾಣೆಯ ಅನೀಲ್ ಕುಮಾರ್ ಡಿ. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಆದರ್ಶ ಮತ್ತು ಕುಬೇರ ಕಾರ್ಯಪ್ರವೃತ್ತರಾಗಿ, ಆರೋಪಿಯ ಪತ್ತೆಗೆ ತಕ್ಷಣ ಕಾರ್ಯಾಚರಣೆ ಆರಂಭಿಸಿದರು.
ಪೊಲೀಸರ ತನಿಖೆಯಲ್ಲಿ ಆರೋಪಿ ಗೋವಿಂದ ಉಡುಪಿ ರೈಲು ನಿಲ್ದಾಣದ ಮೂಲಕ ಹೈದರಾಬಾದ್ ಅಥವಾ ಮುಂಬೈಗೆ ಪರಾರಿಯಾಗಲು ಯತ್ನಿಸುತ್ತಿದ್ದ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಗೋವಿಂದ ಕಳೆದ ಸುಮಾರು 15 ವರ್ಷಗಳಿಂದ ಮನೆಗೆ ತೆರಳದೆ ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧೆಡೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ಕಾರಣವಾದ ನಿಖರ ಹಿನ್ನೆಲೆ ಹಾಗೂ ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

