ಬ್ರಹ್ಮಾವರ: ಹುಟ್ಟಿನಿಂದ ಬದುಕಿನ ಕೊನೆಯ ಕ್ಷಣದವರೆಗೆ ಪ್ರತಿಯೊಂದು ಕ್ಷಣವೂ ಸ್ಮರಣೀಯವಾಗಿರುವುದಿಲ್ಲ. ಆದರೆ ಬದುಕಿನಲ್ಲಿ ದೊರೆಯುವ ಕೆಲವು ಅವಕಾಶಗಳು ಹಾಗೂ ಸಂದರ್ಭಗಳು ಆ ಕ್ಷಣಗಳನ್ನು ಅವಿಸ್ಮರಣೀಯವಾಗಿಸುತ್ತವೆ. ಅಂತಹ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ಕಾರ್ಯಕ್ರಮವೇ ತುಳುನಾಡು ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ‘ಆಟಿಡೊಂಜಿ ದಿನ’ದ ‘ಆಟಿದ ಐಸಿರಿ’ ಸಾಂಸ್ಕೃತಿಕ ಕಲಾ ವೈಭವ ಎಂದು ತುಳುನಾಡು ರಕ್ಷಣಾ ವೇದಿಕೆಯ ಮುಖಂಡರು ಅಭಿಪ್ರಾಯಪಟ್ಟರು.

ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಘಟಕದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ತುಳುನಾಡು ರಕ್ಷಣಾ ವೇದಿಕೆ (ರಿ.) ಬ್ರಹ್ಮಾವರ ತಾಲೂಕು ಘಟಕದ ವತಿಯಿಂದ ‘ಆಟಿದ ಐಸಿರಿ’ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಗಿತ್ತು. ತುಳುನಾಡಿನ ಸಂಸ್ಕೃತಿ, ಆಚಾರ–ವಿಚಾರ, ಜನಪದ ಕಲೆ ಹಾಗೂ ಪರಂಪರೆಯನ್ನು ಪರಿಚಯಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿತ್ತು.
ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಬ್ರಹ್ಮಾವರ ತಾಲೂಕು ಘಟಕದ ಪ್ರತಿಯೊಬ್ಬ ಸದಸ್ಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ವಿಶೇಷ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ತಾಲೂಕು ಘಟಕದ ಅಧ್ಯಕ್ಷರಾದ ಶರತ್ ರಾಜ್ ಆರೂರು ಅವರ ನೇತೃತ್ವದಲ್ಲಿ ‘ಆಟಿದ ಐಸಿರಿ’ಯಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೆ ಗೌರವ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ತುಳುನಾಡು ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಅಧ್ಯಕ್ಷರಾದ ಫ್ರಾಂಕಿ ಡಿಸೋಜಾ ಮಾತನಾಡಿ, ತುಳುನಾಡಿನ ಸಂಸ್ಕೃತಿ, ಆಚಾರ–ವಿಚಾರ, ಕಲೆ ಹಾಗೂ ಸಂಘಟನೆಯ ವಿಚಾರಧಾರೆಗಳ ಕುರಿತು ವಿವರಿಸಿದರು. ‘ಆಟಿದ ಐಸಿರಿ’ ಮೂಲಕ ನಮ್ಮ ನೆಲದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉತ್ತಮ ಪ್ರಯತ್ನ ನಡೆದಿದ್ದು, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಇಡೀ ತಂಡವನ್ನು ಅವರು ಪ್ರಶಂಸಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಮಾತನಾಡಿ, ಸಂಘಟನೆಯ ಬಲವರ್ಧನೆ, ಸಂಘಟನಾ ಶಕ್ತಿ, ಕಾರ್ಯಕರ್ತರ ಕ್ರಿಯಾಶೀಲತೆ ಹಾಗೂ ಸಂಘಟನೆಯ ಮೂಲಕ ಸಮಾಜಕ್ಕೆ ದೊರೆಯುವ ಫಲಶ್ರುತಿಯ ಕುರಿತು ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷರಾದ ಮನೋಜ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳೂ ಸಂಘಟನೆಯ ಪ್ರಮುಖ ಆಶಯಗಳಲ್ಲಿ ಒಂದಾಗಿದ್ದು, ಎಲ್ಲರೂ ಸಂಘಟಿತರಾಗಿ ಒಗ್ಗಟ್ಟಿನಿಂದ ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ತಾಲೂಕು ಘಟಕದ ಅಧ್ಯಕ್ಷರಾದ ಶರತ್ ರಾಜ್ ಆರೂರು ಮಾತನಾಡಿ, “‘ಒಂದು ಕೈ ಸೇರಿದರೆ ಚಪ್ಪಾಳೆಯಾಗುವುದಿಲ್ಲ’; ಎಲ್ಲರೂ ಒಂದಾಗಿ ಸಂಘಟಿತರಾಗಿ ಕೆಲಸ ಮಾಡಿದಾಗ ಮಾತ್ರ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ‘ಆಟಿದ ಐಸಿರಿ’ ಕಾರ್ಯಕ್ರಮದ ಯಶಸ್ಸಿನ ಹಿಂದೆ ಪ್ರತಿಯೊಬ್ಬ ಸದಸ್ಯರ ಪರಿಶ್ರಮ ಮತ್ತು ಸಹಕಾರವಿದೆ. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರೂ ಅಭಿನಂದನೆಗೆ ಅರ್ಹರು,” ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ಸದಸ್ಯರಾದ ವಿಜಯ್ ಆಚಾರ್ಯ ಆರೂರು ಹಾಗೂ ಹರ್ಷಿತ್ ದೇವಾಡಿಗ ನೀಲಾವರ ಅವರನ್ನು ಜಿಲ್ಲಾ ಅಧ್ಯಕ್ಷರಾದ ಫ್ರಾಂಕಿ ಡಿಸೋಜಾ ಅವರು ಸೂರ್ಯ–ಚಂದ್ರರಿರುವ ಶಾಲು ಹೊದಿಸಿ ಆತ್ಮೀಯವಾಗಿ ಸಂಘಟನೆಗೆ ಬರಮಾಡಿಕೊಂಡರು.
‘ಆಟಿದ ಐಸಿರಿ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ, ಯಕ್ಷಗಾನ, ಜನಪದ ನೃತ್ಯ, ಆಟಿಕಳಂಜೆ, ಕಂಗಿಲು, ಹುಲಿವೇಷ, ಕೋಟಿ–ಚೆನ್ನಯ, ನಾಗಾರಾಧನೆ, ಕುಣಿತ ಭಜನೆ ಹಾಗೂ ಅಬ್ಬರದ ಬೊಬ್ಬರ್ಯ ರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಿದ ಸದಸ್ಯರಿಗೆ ತಾಲೂಕು ಅಧ್ಯಕ್ಷರಾದ ಶರತ್ ರಾಜ್ ಆರೂರು ಅವರ ಮುಖಾಂತರ ಜಿಲ್ಲಾ ಅಧ್ಯಕ್ಷರಾದ ಫ್ರಾಂಕಿ ಡಿಸೋಜಾ ಅವರು ಗೌರವ ಸ್ಮರಣಿಕೆ ನೀಡಿ ಅಭಿನಂದಿಸಿದರು.
ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಆಚಾರ್ಯ ಮಾತನಾಡಿ, ‘ಆಟಿದ ಐಸಿರಿ’ಯಂತಹ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದ ಜಿಲ್ಲಾ ಘಟಕಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶ್ರಮಿಸಿದ ಕಾರ್ಯಕರ್ತರನ್ನು ಗೌರವಿಸುವುದು ಅವರಲ್ಲಿ ಮತ್ತಷ್ಟು ಉತ್ಸಾಹ ತುಂಬುವುದರ ಜೊತೆಗೆ ಮುಂದಿನ ಕಾರ್ಯಕ್ರಮಗಳ ಯಶಸ್ಸಿಗೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಹಾಗೂ ತಾಲೂಕು ಘಟಕದ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಘಟಕದ ಸದಸ್ಯರಾದ ವಿಜಯ್ ಆರೂರು, ರಾಕೇಶ್, ರವಿ, ರಮೇಶ್, ಗೋಪಾಲ್ ನಾಯ್ಕ್, ಉಮೇಶ್ ಬಿರ್ತಿ, ದಿನೇಶ್ ಆಚಾರ್ಯ, ವೈಶಾಲ್, ಸೌರಭ, ನವ್ಯಶ್ರೀ, ಸುಗಂಧಿ, ಭೂಮಿಕ, ಸುಹಾಸ್, ಅರ್ಜುನ್ ನಿಶಾನ್, ಆದರ್ಶ್ ಹಾಗೂ ಅಭಿಷೇಕ್, ಕೃತಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತುಳುನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ‘ಆಟಿದ ಐಸಿರಿ’ಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.

