ಮಂಗಳೂರು, ಆ. 6: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮದ್ಯದೊಂದಿಗೆ ಆಹಾರ ಪೂರೈಸುವ (ಬಾರ್ ಅಂಡ್ ರೆಸ್ಟೋರೆಂಟ್) ಬಾರ್ಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಬುಧವಾರ ರಾತ್ರಿ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಕಾರ್ಯಾಚರಣೆ ವೇಳೆ ಬಾರ್ಗಳಿಗೆ ಆಗಮಿಸಿದ್ದ ಗ್ರಾಹಕರ ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಅಪ್ರಾಪ್ತ ವಯಸ್ಕರು ಮದ್ಯ ಸೇವಿಸುತ್ತಿರುವ ಬಗ್ಗೆ ವಿಶೇಷ ನಿಗಾ ವಹಿಸಲಾಯಿತು. ಅಲ್ಲದೆ, ಬಾರ್ಗಳ ಸನ್ನದುದಾರರು ಮತ್ತು ಸಿಬ್ಬಂದಿಗೆ ಯಾವುದೇ ಸಂದರ್ಭದಲ್ಲೂ ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಅಪ್ರಾಪ್ತರಿಗೆ ಮದ್ಯ ಪೂರೈಸಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಬಾರ್ಗಳ ವಿರುದ್ಧ ಅಬಕಾರಿ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು. ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಇಂತಹ ವಿಶೇಷ ತಪಾಸಣೆಗಳನ್ನು ಮುಂದಿನ ದಿನಗಳಲ್ಲಿಯೂ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಅವರ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಗೆ ಮಂಗಳೂರು ಉಪವಿಭಾಗ–1ರ ಅಬಕಾರಿ ಉಪ ಅಧೀಕ್ಷಕಿ ಗಾಯತ್ರಿ ಸಿ.ಎಚ್. ನೇತೃತ್ವ ವಹಿಸಿದ್ದರು.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಚೇತನ್ ಕುಮಾರ್, ಪ್ರತಿಭಾ, ಮಿಲ್ಲರ್ ಜಾನ್ಸನ್ ಡಿಸೋಜ, ಕಮಲ ಹಾಗೂ ದತ್ತಗುರು, ಉಪನಿರೀಕ್ಷಕರಾದ ರಜಾಕ್ ಮತ್ತು ಜಯಪ್ಪ, ಸಿಬ್ಬಂದಿಗಳಾದ ಸಂದೀಪ್, ಸಂಧ್ಯಾ, ಶಿವಲಿಂಗಪ್ಪ, ಆನಂದ್, ಮಂಜಪ್ಪ ಹಾಗೂ ದೇವರಾಜ್ ಭಾಗವಹಿಸಿದ್ದರು.

