ಉಡುಪಿ, ಆ. 3: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್ ಹಾಗೂ ಪಬ್ಗಳಲ್ಲಿ 21 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಮದ್ಯ ಹಾಗೂ ಹುಕ್ಕಾ ಪೂರೈಕೆ ಮಾಡಲಾಗುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಮಣಿಪಾಲ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಒಟ್ಟು 87 ಯುವಕ-ಯುವತಿಯರು ಹಾಗೂ ಓರ್ವ ಅಪ್ರಾಪ್ತ ಬಾಲಕ ಮದ್ಯ ಸೇವಿಸುತ್ತಿರುವುದು ಪತ್ತೆಯಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ನಿರ್ದೇಶನದ ಮೇರೆಗೆ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಆರು ವಿಶೇಷ ತಂಡಗಳನ್ನು ರಚಿಸಿ ಏಕಕಾಲದಲ್ಲಿ ವಿವಿಧ ಬಾರ್ ಹಾಗೂ ಪಬ್ಗಳ ಮೇಲೆ ದಾಳಿ ನಡೆಸಲಾಯಿತು.
ಪರಿಶೀಲನೆ ವೇಳೆ ಬಾರ್ನಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಯುವಕರು ಹಾಗೂ 2 ಯುವತಿಯರು, ಒಟ್ಟು 14 ಮಂದಿ ಪತ್ತೆಯಾಗಿದ್ದಾರೆ.
ಅಲ್ಲದೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರವೇಶ ನಿಷೇಧಿಸಿರುವ ಬಗ್ಗೆ ಯಾವುದೇ ಸೂಚನಾ ಫಲಕ ಇಲ್ಲ ಎಂದು ಬಾರ್ ಮ್ಯಾನೇಜರ್ ತಿಳಿಸಿದ್ದಾರೆ
ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಮದ್ಯ ಹಾಗೂ ಹುಕ್ಕಾ ಪೂರೈಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ತಪಾಸಣೆ ಕೈಗೊಳ್ಳಲಾಗಿತ್ತು.
ಕಾರ್ಯಾಚರಣೆಯಲ್ಲಿ ಮಣಿಪಾಲದ ಎಕ್ಸ್ಟಸಿ 7ನೇ ಹೆವೆನ್ ಪಬ್, ಈಶ್ವರ್ ನಗರದ ಸಾಯಿ ಸಾಗರ್ ಬಾರ್ ಆ್ಯಂಡ್ ರೆಸ್ಟೋರೆಂಟ್, ಮಣಿಪಾಲದ ಡೌನ್ ದಿ ರೋಡ್ ಬಾರ್ ಆ್ಯಂಡ್ ರೆಸ್ಟೋರೆಂಟ್, ಡೆಕ್ಸ್ಟರ್ ಬಾರ್ ಆ್ಯಂಡ್ ರೆಸ್ಟೋರೆಂಟ್, ಈಶ್ವರ್ ನಗರದ ಡಿ ಟೀ ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಜನನಿ (ಎಡ್ಜ್) ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಒಟ್ಟು ಆರು ಬಾರ್ ಮತ್ತು ಪಬ್ಗಳನ್ನು ಪರಿಶೀಲಿಸಲಾಯಿತು.
ಪ್ರಾಥಮಿಕ ತನಿಖೆಯಲ್ಲಿ ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತುಗಳು) ನಿಯಮ 10(1)(ಇ), ಕರ್ನಾಟಕ ಅಬಕಾರಿ ಕಾಯ್ದೆಯ ಸೆಕ್ಷನ್ 36(1)(ಬಿ) ಹಾಗೂ ಅನ್ವಯಿಸುವ ಕಾನೂನುಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿತ ಬಾರ್ ಮತ್ತು ಪಬ್ಗಳ ಮಾಲೀಕರು ಹಾಗೂ ವ್ಯವಸ್ಥಾಪಕರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಆರು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬಾರ್ ಹಾಗೂ ಪಬ್ಗಳಿಗೆ ಪ್ರವೇಶ ನೀಡುವುದು, ಮದ್ಯ ಪೂರೈಸುವುದು ಅಥವಾ ಅಬಕಾರಿ ಹಾಗೂ ಇತರೆ ಅನ್ವಯಿಸುವ ಕಾನೂನುಗಳನ್ನು ಉಲ್ಲಂಘಿಸುವ ಯಾವುದೇ ಸಂಸ್ಥೆಗಳ ವಿರುದ್ಧ ಮುಂದೆಯೂ ಇಂತಹ ವಿಶೇಷ ಜಾರಿ ಕಾರ್ಯಾಚರಣೆಗಳನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

