ನವದೆಹಲಿ, ಜುಲೈ 31: ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ (NCISM) ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದು, ಕಾನೂನುಬದ್ಧವಾಗಿ ನೋಂದಾಯಿತರಾಗಿರುವ ಆಯುಷ್ ವೈದ್ಯರನ್ನು “ನಕಲಿ ವೈದ್ಯರು (Quacks)” ಅಥವಾ “ಬೋಗಸ್ ವೈದ್ಯರು” ಎಂದು ಕರೆಯುವುದಕ್ಕೆ ಯಾವುದೇ ಕಾನೂನು ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದೆ.

NCISM ಕಾಯಿದೆ, 2020ರ ಅಡಿಯಲ್ಲಿ ಹೊರಡಿಸಲಾದ ಈ ಸುತ್ತೋಲೆಯಲ್ಲಿ, ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ (BAMS), ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಅಂಡ್ ಸರ್ಜರಿ (BUMS), ಬ್ಯಾಚುಲರ್ ಆಫ್ ಸಿದ್ಧ ಮೆಡಿಸಿನ್ ಅಂಡ್ ಸರ್ಜರಿ (BSMS) ಹಾಗೂ ಬ್ಯಾಚುಲರ್ ಆಫ್ ಸೋವಾ-ರಿಗ್ಪಾ ಮೆಡಿಸಿನ್ ಅಂಡ್ ಸರ್ಜರಿ (BSRMS) ಪದವಿಗಳನ್ನು ಪಡೆದ, ಸಂಬಂಧಪಟ್ಟ ರಾಜ್ಯ ಭಾರತೀಯ ವೈದ್ಯಕೀಯ ಮಂಡಳಿಗಳಲ್ಲಿ ನಿಯಮಾನುಸಾರ ನೋಂದಾಯಿತರಾಗಿರುವ ವೈದ್ಯರು ಕಾನೂನುಬದ್ಧವಾಗಿ ಮಾನ್ಯತೆ ಪಡೆದ ಆರೋಗ್ಯ ವೃತ್ತಿಪರರು ಎಂದು ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣಗಳು, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಸೇರಿದಂತೆ ವಿವಿಧ ಸಾರ್ವಜನಿಕ ವೇದಿಕೆಗಳಲ್ಲಿ ಕೆಲವರು ಇಂತಹ ವೈದ್ಯರನ್ನು “ನಕಲಿ ವೈದ್ಯರು” ಅಥವಾ “ಬೋಗಸ್ ವೈದ್ಯರು” ಎಂದು ಕರೆಯುವ ಮೂಲಕ ಮಾನಹಾನಿ, ಕಿರುಕುಳ ಹಾಗೂ ತಪ್ಪು ಮಾಹಿತಿ ಹರಡುವ ಪ್ರವೃತ್ತಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ.
NCISM ಕಾಯಿದೆ, 2020 ಭಾರತೀಯ ವೈದ್ಯಕೀಯ ಪದ್ಧತಿಗಳ ಶಿಕ್ಷಣ, ನೈತಿಕತೆ ಹಾಗೂ ವೃತ್ತಿಪರ ಸೇವೆಯನ್ನು ನಿಯಂತ್ರಿಸುವ ಕಾನೂನು ಚೌಕಟ್ಟನ್ನು ಒದಗಿಸಿದ್ದು, ಅದರಡಿ ನೋಂದಾಯಿತ ವೈದ್ಯರು ಕಾನೂನಿನಿಂದ ಮಾನ್ಯತೆ ಪಡೆದ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದ್ದಾರೆ ಎಂದು ಆಯೋಗ ತಿಳಿಸಿದೆ.
ಇಂತಹ ನೋಂದಾಯಿತ ವೈದ್ಯರನ್ನು ಸಾರ್ವಜನಿಕವಾಗಿ “ನಕಲಿ ವೈದ್ಯರು” ಅಥವಾ “ಬೋಗಸ್ ವೈದ್ಯರು” ಎಂದು ಕರೆಯುವುದು ಕಾನೂನುಬದ್ಧ ಮಾನ್ಯತೆಗೆ ವಿರುದ್ಧವಾಗಿದ್ದು, ಅವರ ವೃತ್ತಿಪರ ಹಾಗೂ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು NCISM ಎಚ್ಚರಿಕೆ ನೀಡಿದೆ.
ಭಾರತೀಯ ವೈದ್ಯಕೀಯ ಪದ್ಧತಿಯ ಎಲ್ಲಾ ಅರ್ಹ ಹಾಗೂ ಕಾನೂನುಬದ್ಧವಾಗಿ ನೋಂದಾಯಿತ ವೈದ್ಯರು ಆರೋಗ್ಯ ಸೇವಾ ವೃತ್ತಿಪರರಾಗಿದ್ದು, ಅವರಿಗೆ ಕಾನೂನಿನಡಿ ದೊರೆಯುವ ಹಕ್ಕುಗಳು, ರಕ್ಷಣೆ ಮತ್ತು ವೃತ್ತಿಪರ ಗೌರವವನ್ನು ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಆಯೋಗ ತನ್ನ ಸುತ್ತೋಲೆಯಲ್ಲಿ ಪುನರುಚ್ಚರಿಸಿದೆ.
ಈ ಸುತ್ತೋಲೆಗೆ ನೈತಿಕತೆ ಮತ್ತು ನೋಂದಣಿ ಮಂಡಳಿಯ ಅಧ್ಯಕ್ಷ ಡಾ. ಸುಶ್ರುತ ಕನೌಜಿಯಾ ಅವರು ಸಹಿ ಹಾಕಿದ್ದು, 2026ರ ಜುಲೈ 29ರಿಂದ ಇದು ಜಾರಿಗೆ ಬಂದಿದೆ.

