ಮಂಗಳೂರು, ಜು. 24: ಜನತಾದಳ (ಜಾತ್ಯತೀತ) ರಾಜ್ಯ ನಾಯಕರೂ, ವಿಧಾನ ಪರಿಷತ್ ಸದಸ್ಯರೂ ಹಾಗೂ ಕರ್ನಾಟಕ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯ ಸದಸ್ಯರೂ ಆದ ಟಿ.ಎ. ಶರವಣ ಅವರು ಇಂದು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿ ಅಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಮೂಲಸೌಕರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.



ಬಳಿಕ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿ, ಪ್ರವಾಸೋದ್ಯಮದ ಉತ್ತೇಜನ, ಪರಿಸರ ಸಂರಕ್ಷಣೆ, ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳ ಕಲ್ಪನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಪಿಲಿಕುಳವನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಮುಖ ಪ್ರವಾಸಿ ತಾಣವಾಗಿ ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚೆ ನಡೆಯಿತು. ಅಭಿವೃದ್ಧಿ ಯೋಜನೆಗಳನ್ನು ವೇಗಗೊಳಿಸಿ, ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಟಿ.ಎ. ಶರವಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ವಸಂತ್ ಪೂಜಾರಿ, ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು, ಪ್ರಶಾಂತ್ ಭಟ್ ಕಡಬ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






