ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.)ಯ ಸಂಸ್ಥಾಪಕರಲ್ಲಿ ಪ್ರಮುಖರೂ, ರಾಜ್ಯ ಸಂಘಟನಾ ಸಂಚಾಲಕರಾಗಿದ್ದ ಹಿರಿಯ ಹೋರಾಟಗಾರ ಎಂ. ದೇವದಾಸ್ ಅವರ ನಿಧನದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ ಎಂದು ತುಳುನಾಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಂ. ದೇವದಾಸ್ ಅವರು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ಅಪರೂಪದ ಹೋರಾಟಗಾರರಾಗಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ರಾಜ್ಯದ ಪ್ರಬಲ ಜನಾಂದೋಲನವಾಗಿ ಬೆಳೆಸುವಲ್ಲಿ ಅವರು ಸಲ್ಲಿಸಿದ ಸೇವೆ ಮತ್ತು ನಾಯಕತ್ವ ಸದಾ ಸ್ಮರಣೀಯವಾಗಿದೆ.
ಬಜ್ಪೆ ನಾಗರಿಕ ಹಿತ ರಕ್ಷಣಾ ವೇದಿಕೆಯಲ್ಲಿ ಅನೇಕ ಜನಪರ ಹೋರಾಟಗಳಲ್ಲಿ ಅವರೊಂದಿಗೆ ಕೈಜೋಡಿಸುವ ಅವಕಾಶ ನಮಗೆ ದೊರೆತಿತ್ತು. ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ತೋರಿದ ಬದ್ಧತೆ, ನೇರ ನಿಲುವು ಹಾಗೂ ಹೋರಾಟದ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ.
ಅವರ ಅಗಲಿಕೆ ದಲಿತ ಚಳವಳಿಗೆ, ಸಾಮಾಜಿಕ ನ್ಯಾಯದ ಹೋರಾಟಕ್ಕೆ ಹಾಗೂ ರಾಜ್ಯದ ಪ್ರಗತಿಪರ ಶಕ್ತಿಗಳಿಗೆ ತುಂಬಲಾರದ ನಷ್ಟವಾಗಿದೆ. ಅವರು ಬಿಟ್ಟುಹೋದ ಆದರ್ಶಗಳು ಮತ್ತು ಹೋರಾಟದ ಮೌಲ್ಯಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿವೆ.
ಭಗವಂತನು ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದ ಸದಸ್ಯರು, ಬಂಧು-ಬಳಗ, ಹಿತೈಷಿಗಳು ಹಾಗೂ ಸಹ ಹೋರಾಟಗಾರರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಯೋಗಿಶ್ ಶೆಟ್ಟಿ ಜಪ್ಪು ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

