ಮಂಗಳೂರು, ಜುಲೈ 20: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಅಬ್ಬರದ ನಡುವೆ ಸೋಮವಾರ ಮಧ್ಯಾಹ್ನ ಬಾವುಟಗುಡ್ಡೆಯ ಅಲೋಶಿಯಸ್ ಕಾಲೇಜು ಸಮೀಪದ ಒಳ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಘಟನೆ ಸಂಭವಿಸಿದೆ.

ಮರವು ಕಾರಿನ ಹಿಂಭಾಗದ ಮೇಲೆ ಬಿದ್ದ ಪರಿಣಾಮ ವಾಹನಕ್ಕೆ ತೀವ್ರ ಹಾನಿಯಾಗಿದ್ದು, ಸಮೀಪದಲ್ಲಿದ್ದ ಕ್ಯಾಂಟೀನ್ನ ಮೇಲ್ಛಾವಣಿಗೂ ಹಾನಿಯಾಗಿದೆ. ಆದರೆ ಕಾರಿನ ಚಾಲಕರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿರುವುದು ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಘಟನೆಯ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಪಾಂಡೇಶ್ವರ ಅಗ್ನಿಶಾಮಕ ದಳ, ಎಸ್ಡಿಆರ್ಎಫ್ (SDRF), ಮೆಸ್ಕಾಂ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮರವನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಪುನಃ ಸುಗಮಗೊಳಿಸಿದರು.
ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ದುರ್ಬಲಗೊಂಡಿರುವ ಮರಗಳು ಯಾವಾಗ ಬೇಕಾದರೂ ಉರುಳುವ ಸಾಧ್ಯತೆ ಇರುವುದರಿಂದ, ಮರಗಳ ಸಮೀಪ ವಾಹನ ನಿಲ್ಲಿಸುವುದು ಹಾಗೂ ಸಂಚರಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.





