ಬಂಟ್ವಾಳ, ಜುಲೈ 12: ಕರ್ನಾಟಕ ರಾಜ್ಯ ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ, ಬೆಂಕಿ ಅವಘಡದಿಂದ ಸಂತ್ರಸ್ತಗೊಂಡಿದ್ದ ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಬೊಳ್ಪಾದೆ-ಕನ್ಯಾನದ ಕುಲಾಲ ಕುಟುಂಬಕ್ಕೆ ನಿವೇಶನ ಸಹಿತ ನಿರ್ಮಿಸಲಾದ ‘ಕುಂಭ ಕುಟೀರ’ ಮನೆಯನ್ನು ಭಾನುವಾರ ಹಸ್ತಾಂತರಿಸಲಾಯಿತು.
ಇದು ಬಂಟ್ವಾಳ ತಾಲೂಕಿನ ಎಂಟನೇ ಹಾಗೂ ಕರಾವಳಿ-ಮಲೆನಾಡು ಭಾಗದ ಹದಿನೈದನೇ ಮನೆ ನಿರ್ಮಾಣ ಯೋಜನೆಯಾಗಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಯುವ ವೇದಿಕೆಯ ಮಾನವೀಯ ಸಮಾಜಸೇವೆಯ ಮಾದರಿಯಾಗಿ ಗುರುತಿಸಿಕೊಂಡಿದೆ.
2025ರ ಡಿಸೆಂಬರ್ 19ರಂದು ಕನ್ಯಾನದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈ ಕುಟುಂಬದ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟುಹೋಗಿತ್ತು. ಘಟನೆಯ ವೇಳೆ ಮನೆಯವರು ಹೊರಗಿದ್ದ ಕಾರಣ ಪ್ರಾಣಾಪಾಯ ತಪ್ಪಿದರೂ, ಮನೆಯಲ್ಲಿದ್ದ ಹಣ, ಚಿನ್ನಾಭರಣ, ಬಟ್ಟೆ ಹಾಗೂ ಇತರ ಅಗತ್ಯ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ನಂತರ ಕನ್ಯಾನ ಗ್ರಾಮ ಪಂಚಾಯಿತಿ ತಾತ್ಕಾಲಿಕ ಆಶ್ರಯವಾಗಿ ಕೊಠಡಿಯನ್ನು ನೀಡಿದ್ದು, ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರೇಖಾ ರಮೇಶ್ ಸಹಕಾರ ನೀಡಿದ್ದರು.
ಈ ದುರ್ಘಟನೆಯ ಮಾಹಿತಿ ಕರ್ನಾಟಕ ರಾಜ್ಯ ಕುಂಬಾರರ ಯುವ ವೇದಿಕೆಯ ಗಮನಕ್ಕೆ ಬಂದ ಬಳಿಕ, ಜಿಲ್ಲಾ ಅಧ್ಯಕ್ಷ ಅನಿಲ್ ದಾಸ್ ಅವರು ಸಂತ್ರಸ್ತ ಕುಟುಂಬಕ್ಕೆ ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು. ಅದರಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ವೇದಿಕೆ ಶ್ರಮದಾನ, ದೇಣಿಗೆ ಸಂಗ್ರಹ ಹಾಗೂ ವಿವಿಧ ಸಹಕಾರದ ಮೂಲಕ ಮನೆ ನಿರ್ಮಾಣ ಕಾರ್ಯವನ್ನು ಕೈಗೊಂಡಿತು. ಬೆಳ್ತಂಗಡಿ ತಾಲೂಕಿನ ಗುಂಡೂರಿ ಗ್ರಾಮದ ಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಅವರೂ ಮಹತ್ವದ ಸಹಕಾರ ನೀಡಿದರು.

ಸಂಜೆ ನಡೆದ ಹಸ್ತಾಂತರ ಸಮಾರಂಭದಲ್ಲಿ ಕುಲಾಲ ಯುವ ವೇದಿಕೆಯ ಸಂಸ್ಥಾಪಕ ಡಾ. ಅಣ್ಣಯ್ಯ ಕುಲಾಲ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮನೆ ಎಂದರೆ ಕೇವಲ ಕಲ್ಲು-ಇಟ್ಟಿಗೆಯ ಕಟ್ಟಡವಲ್ಲ. ಅದು ಕುಟುಂಬದ ಸಂತೋಷ, ದುಃಖ, ಪ್ರೀತಿ ಹಾಗೂ ಜೀವನ ಮೌಲ್ಯಗಳ ನೆಲೆ. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಹೊಂದಾಣಿಕೆಯಿಂದ ಬದುಕಿದರೆ ಮನೆ ನಿಜವಾದ ಸ್ವರ್ಗವಾಗುತ್ತದೆ” ಎಂದು ಹಿತನುಡಿಗಳನ್ನಾಡಿದರು.

ತುಳುನಾಡ ಸಭಾ ಕೇಂದ್ರ ಸಮಿತಿಯ ಅಧ್ಯಕ್ಷರು ಹಾಗೂ ನಿಟ್ಟೆ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅವಿನ್ ಆಳ್ವ ಅವರು, ಕುಲಾಲ ಸಮಾಜವು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಸಮಾಜಮುಖಿ ಸೇವೆ ಸಲ್ಲಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಸುಧಾಕರ್ ಸಾಲ್ಯಾನ್, ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಜಿಲ್ಲಾ ಅಧ್ಯಕ್ಷ ಅನಿಲ್ ದಾಸ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುಮಿತ್ ಸಾಲ್ಯಾನ್, ಮಾಜಿ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಡಾ. ಲಿಂಗರಾಜು ಕೆ., ನಿವೃತ್ತ ಕಮಾಂಡೆಂಟ್ ಚಂದಪ್ಪ ಮೂಲ್ಯ, ವಿಟ್ಲ ಕುಲಾಲ ಸಂಘದ ಅಧ್ಯಕ್ಷ ಬಾಬು ಕುಲಾಲ್ ವಜ್ರಮಾತ, ಸಮಾಜಸೇವಕ ಅಚ್ಚುತ ಕುಲಾಲ್, ಮಹಾಬಲ ಕುಲಾಲ್, ಅಶೋಕ್ ಕುಲಾಲ್, ದಿನಕರ್ ಕುಲಾಲ್, ಮಾಜಿ ರಾಜ್ಯಾಧ್ಯಕ್ಷ ಗಂಗಾಧರ ಬಂಜನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಮನೆ ನಿರ್ಮಾಣಕ್ಕೆ ಶ್ರಮದಾನ ಮತ್ತು ಸಹಕಾರ ನೀಡಿದ ಶಿವಪ್ರಸಾದ್ ಕುಲಾಲ್ (ಟೈಲ್ಸ್ ಅಳವಡಿಕೆ), ಮನೆ ಮಾಲೀಕ ಅಬ್ದುಲ್ ರೆಹಮಾನ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ರಮೇಶ್, ಎಲೆಕ್ಟ್ರಿಷಿಯನ್ ರವೀಂದ್ರ ಕುಲಾಲ್ ಹಾಗೂ ಸಹೋದ್ಯೋಗಿಗಳು, ನವೀನ್ ಕುಲಾಲ್ ಪೆದಮಲೆ ಮತ್ತು ಬಡಗಿ ಜಯರಾಮ ಗೌಡ ಸೇರಿದಂತೆ ಹಲವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಸುಕುಮಾರ್ ಬಂಟ್ವಾಳ ಸ್ವಾಗತಿಸಿದರು. ಎಚ್.ಕೆ. ನೈನಾಡ್ ಕಾರ್ಯಕ್ರಮ ನಿರೂಪಿಸಿದರು. ಫಲಾನುಭವಿ ಕುಟುಂಬದ ಸದಸ್ಯೆ ಕುಮಾರಿ ಗುಣವತಿ ಕುಲಾಲ್ ಧನ್ಯವಾದ ಅರ್ಪಿಸಿದರು.
ಸಂತ್ರಸ್ತ ಕುಟುಂಬಕ್ಕೆ ಹೊಸ ಬದುಕಿನ ಭರವಸೆ ನೀಡಿದ ‘ಕುಂಭ ಕುಟೀರ’ ಯೋಜನೆ ಸಮಾಜಸೇವೆಯ ಅರ್ಥಪೂರ್ಣ ಹೆಜ್ಜೆಯಾಗಿ ಜನಮೆಚ್ಚುಗೆಗೆ ಪಾತ್ರವಾಗಿದೆ.



