ಬೆಂಗಳೂರು, ಜುಲೈ 8: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ನಡೆಸುವ ಪ್ರಕ್ರಿಯೆಗೆ ರಾಜ್ಯ ಚುನಾವಣಾ ಆಯೋಗ ಅಧಿಕೃತವಾಗಿ ವೇಗ ನೀಡಿದೆ. ರಾಜ್ಯ ಸರ್ಕಾರದಿಂದ ಚುನಾವಣೆ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸೂಚನೆಗಳನ್ನು ಈಗಾಗಲೇ ಹೊರಡಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ಚುನಾವಣೆಯ ಕಾವೇರತೊಡಗಿದೆ.
2027ರ ಮಾರ್ಚ್ ಅಂತ್ಯದೊಳಗೆ ಅವಧಿ ಮುಕ್ತಾಯಗೊಳ್ಳಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹೊಸದಾಗಿ ಪುನರ್ರಚನೆಯಾಗಿರುವ 42 ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯೋಗ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಚುನಾವಣೆ ಪ್ರಕ್ರಿಯೆಯನ್ನು ಅತ್ಯಂತ ಸುಗಮ ಮತ್ತು ಪಾರದರ್ಶಕವಾಗಿ ನಡೆಸಲು ಆಯೋಗ ಅಧಿಕಾರಿಗಳಿಗೆ ಹೊಸದೊಂದು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಇದರ ಪ್ರಕಾರ, ಪ್ರತಿ ಗ್ರಾಮ ಪಂಚಾಯಿತಿಗೊಂದು ‘ಗ್ರೂಪ್-ಬಿ’ ವರ್ಗದ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗುತ್ತದೆ. ಈ ಚುನಾವಣಾಧಿಕಾರಿಗಳ ಕೆಲಸದಲ್ಲಿ ನಿರ್ವಾಹಕರು, ಶಿರಸ್ತೇದಾರ್, ಸೂಪರಿಂಟೆಂಡೆಂಟ್ ಅಥವಾ ವ್ಯವಸ್ಥಾಪಕ ಹುದ್ದೆಯ ಅಧಿಕಾರಿಗಳನ್ನು ಸಹಾಯಕ ಚುನಾವಣಾಧಿಕಾರಿಗಳಾಗಿ ನಿಯೋಜಿಸಲು ಸೂಚಿಸಲಾಗಿದೆ. ಯಾರದ್ದೇ ಕಾರಣಕ್ಕೂ ಅಧಿಕಾರಿಗಳ ಸ್ವಂತ ಊರು ಅಥವಾ ಅವರ ಕ್ಷೇತ್ರಕ್ಕೆ ಅವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಆಯೋಗ ಸ್ಪಷ್ಟಪಡಿಸಿದೆ.
ಪಂಚಾಯಿತಿಗಳಲ್ಲಿ ಇರುವ ಸದಸ್ಯರ ಸ್ಥಾನಗಳ ಆಧಾರದ ಮೇಲೆ ಅಧಿಕಾರಿಗಳ ನಿಯೋಜನೆಗೆ ಪ್ರಮಾಣವನ್ನು ನಿಗದಿಪಡಿಸಲಾಗಿದೆ. 25 ಸದಸ್ಯ ಸ್ಥಾನಗಳವರೆಗೆ ಇರುವ ಗ್ರಾಮ ಪಂಚಾಯಿತಿಗಳಿಗೆ ಒಬ್ಬ ಚುನಾವಣಾಧಿಕಾರಿ ಹಾಗೂ ಒಬ್ಬ ಸಹಾಯಕ ಚುನಾವಣಾಧಿಕಾರಿಯನ್ನು ನೇಮಿಸಲಾಗುತ್ತದೆ. ಸದಸ್ಯರ ಸಂಖ್ಯೆ 25ರಿಂದ 35ರೊಳಗಿದ್ದರೆ, ಒಬ್ಬ ಚುನಾವಣಾಧಿಕಾರಿಯೊಂದಿಗೆ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗುತ್ತದೆ. 35ಕ್ಕಿಂತ ಹೆಚ್ಚು ಸದಸ್ಯ ಸ್ಥಾನಗಳಿರುವ ದೊಡ್ಡ ಪಂಚಾಯಿತಿಗಳಲ್ಲಿ ಇಬ್ಬರು ಚುನಾವಣಾಧಿಕಾರಿಗಳು ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳು ಜವಾಬ್ದಾರಿ ಹಂಚಿಕೊಳ್ಳಲಿದ್ದಾರೆ.
ರಾಜ್ಯ ಚುನಾವಣೆ ಆಯೋಗವು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದು, ಚುನಾವಣಾ ಪ್ರಕ್ರಿಯೆಯನ್ನು ಯಾವುದೇ ಲೋಪದೋಷಗಳಿಲ್ಲದೆ ನಡೆಸಲು ಅಗತ್ಯ ಸಿಬ್ಬಂದಿ ನಿಯೋಜನೆಗೆ ಆದ್ಯತೆ ನೀಡಿದೆ. ಇದರ ಜೊತೆಗೆ, 2027ರ ಏಪ್ರಿಲ್ ನಂತರ ಅವಧಿ ಮುಕ್ತಾಯಗೊಳ್ಳಲಿರುವ 56 ಗ್ರಾಮ ಪಂಚಾಯಿತಿಗಳ ಪಟ್ಟಿಯನ್ನೂ ಆಯೋಗ ತನ್ನ ಸುತೋಲೆಯೊಂದಿಗೆ ಲಗತ್ತಿಸಿದೆ. ಮುಂದಿನ ಹಂತದ ಚುನಾವಣೆ ಸಿದ್ಧತೆಗಳಿಗೂ ಮುನ್ನೋಟ ನೀಡಿದೆ.
ಈ ಮಹತ್ವದ ಬೆಳವಣಿಗೆಯೊಂದಿಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ವ್ಯಕ್ತವಾಗಿದೆ




