ಮಂಗಳೂರು, ಜೂನ್ 30: ಸೀಮೆಎಣ್ಣೆ ಬೆಲೆ ಭಾರೀ ಏರಿಕೆಯಿಂದ ಕರ್ನಾಟಕ ಕರಾವಳಿಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಿ ಮೀನುಗಾರರ ಬದುಕು ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಮೀನುಗಾರರ ಘಟಕದ ಅಧ್ಯಕ್ಷ ರತ್ನಾಕರ ಸುವರ್ಣ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸೀಮೆಎಣ್ಣೆಯ ಬೆಲೆ ಲೀಟರಿಗೆ ₹58ರಿಂದ ₹118ಕ್ಕೆ ಏರಿಕೆಯಾಗಿರುವುದರಿಂದ ನಾಡದೋಣಿ ಮೀನುಗಾರಿಕೆ ನಡೆಸುವುದು ದುಸ್ತರವಾಗಿದೆ ಎಂದು ತಿಳಿಸಿದ್ದಾರೆ. ಪ್ರತಿದಿನ ಒಂದು ನಾಡದೋಣಿಗೆ ಸುಮಾರು 50 ಲೀಟರ್ ಸೀಮೆಎಣ್ಣೆ ಅಗತ್ಯವಿದ್ದು, ಮೀನು ಸಿಗದ ದಿನಗಳಲ್ಲಿ ಮೀನುಗಾರರು ಸಂಪೂರ್ಣ ನಷ್ಟ ಅನುಭವಿಸುವಂತಾಗಿದೆ ಎಂದಿದ್ದಾರೆ.
ಇಂಧನ ವೆಚ್ಚದ ಭಾರದಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸುಮಾರು 70 ಶೇಕಡಾ ನಾಡದೋಣಿಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಸಾವಿರಾರು ಮೀನುಗಾರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಮೀನುಗಾರರಿಗೆ ರಿಯಾಯಿತಿ ದರದಲ್ಲಿ ಸೀಮೆಎಣ್ಣೆ ಪೂರೈಕೆ ಮಾಡಲಾಗುತ್ತಿದ್ದು, ಕರ್ನಾಟಕದ ಮೀನುಗಾರರಿಗೆ ಮಾತ್ರ ಯಾವುದೇ ಸಹಾಯಧನ ದೊರೆಯದಿರುವುದು ಖಂಡಾನೀಯ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೈಗಾರಿಕಾ ಸೀಮೆಎಣ್ಣೆಯನ್ನು ಮೀನುಗಾರಿಕಾ ಸೀಮೆಎಣ್ಣೆಯಾಗಿ ಘೋಷಿಸಿ ಶೂನ್ಯ ತೆರಿಗೆ ವಿಧಿಸಬೇಕು. ಕನಿಷ್ಠ 70 ಶೇಕಡಾ ಸಹಾಯಧನದೊಂದಿಗೆ ರಿಯಾಯಿತಿ ದರದಲ್ಲಿ ಸೀಮೆಎಣ್ಣೆ ಪೂರೈಕೆ ಮಾಡಬೇಕು. ಎಂಆರ್ಪಿಎಲ್ ಮೂಲಕ ನೈಜ ಸಾಂಪ್ರದಾಯಿಕ ಮೀನುಗಾರರಿಗೆ ನೇರ ವಿತರಣೆ ವ್ಯವಸ್ಥೆ ಜಾರಿಗೊಳಿಸುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಬಜೆಟ್ನಲ್ಲಿ ಮೀನುಗಾರರ ಕಲ್ಯಾಣಕ್ಕಾಗಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಅಸ್ತಿತ್ವಕ್ಕೆ ಅಪಾಯ ಎದುರಾಗಲಿದ್ದು, ಮೀನುಗಾರರ ಬದುಕು ರಕ್ಷಿಸಲು ಸರ್ಕಾರ ವಿಳಂಬ ಮಾಡದೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ರತ್ನಾಕರ ಸುವರ್ಣ ಆಗ್ರಹಿಸಿದ್ದಾರೆ.

