ಕಾಸರಗೋಡು, ಜೂನ್ 27: ಧರ್ಮ, ಜಾತಿ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆ ಮಾನವೀಯತೆಯೇ ಶ್ರೇಷ್ಠ ಎಂಬುದನ್ನು ಕೇರಳದ ಕಾಸರಗೋಡಿನಲ್ಲಿ ನಡೆದ ಅಪರೂಪದ ಘಟನೆಯೊಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಕ್ಯಾನ್ಸರ್ನಿಂದ ಮೃತಪಟ್ಟ ಮಾಜಿ ಆರ್ಎಸ್ಎಸ್ ಕಾರ್ಯಕರ್ತ ನಾರಾಯಣ ತೊಟ್ಟತ್ತೋಡಿ (64) ಅವರ ಅಂತ್ಯಸಂಸ್ಕಾರವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಇರ್ಫಾನಾ ಇಕ್ಬಾಲ್ ಅವರು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದು, ಈ ಮಾನವೀಯ ನಡೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.
ಬಾಯಿಯ ಕ್ಯಾನ್ಸರ್ನಿಂದ ಬಳಲುತ್ತಿದ್ದ ನಾರಾಯಣ ತೊಟ್ಟತ್ತೋಡಿ ಅವರು ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಬಳಿಕ ಅವರ ಸ್ವಗ್ರಾಮವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬ್ಲಾಕ್ ವ್ಯಾಪ್ತಿಯ ಮೀಂಜ ಪಂಚಾಯಿತಿಯ ಚಿಗ್ರುಪಾಡವು ಗ್ರಾಮದಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಿಸಲಾಯಿತು.
ಸುಮಾರು ಒಂದು ತಿಂಗಳ ಹಿಂದೆ ಗ್ರಾಮದ ಅಂಗಡಿಯೊಂದರ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ನಾರಾಯಣ ಪತ್ತೆಯಾಗಿದ್ದರು. ಕುಟುಂಬದ ಸಮಸ್ಯೆಗಳಿಂದ ನಿರಾಶ್ರಿತರಾಗಿದ್ದ ಅವರು ಕೊನೆಯ ಹಂತದ ಕ್ಯಾನ್ಸರ್ನಿಂದ ತೀವ್ರವಾಗಿ ಬಳಲುತ್ತಿದ್ದರು. ವಯೋವೃದ್ಧ ಸಹೋದರಿಗೆ ಅವರನ್ನು ನೋಡಿಕೊಳ್ಳುವ ಸಾಮರ್ಥ್ಯವೂ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಮಾಹಿತಿ ತಿಳಿದ ವಾರ್ಡ್ ಸದಸ್ಯ ಶೆರೀಫ್ ಚಿನಾಲಾ ಅವರು ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಅವರನ್ನು ಸಂಪರ್ಕಿಸಿದರು. ಇರ್ಫಾನಾ ಅವರ ಕುಟುಂಬ ನಡೆಸುತ್ತಿರುವ ಶೇಖ್ ಜಾಯೆದ್ ಫೌಂಡೇಶನ್ ವೃದ್ಧಾಶ್ರಮದಲ್ಲಿ ಅವರಿಗೆ ಆಶ್ರಯ ಕಲ್ಪಿಸುವ ಉದ್ದೇಶವಿದ್ದರೂ, ಆರೋಗ್ಯ ಗಂಭೀರವಾಗಿದ್ದ ಕಾರಣ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು.
ನಾರಾಯಣ ಅವರ ನಿಧನದ ಬಳಿಕ ಕುಟುಂಬದವರು ಹಾಗೂ ಆಪ್ತರಿಂದ ಅಗತ್ಯ ಸಹಕಾರ ದೊರೆಯದ ಹಿನ್ನೆಲೆಯಲ್ಲಿ, ಇರ್ಫಾನಾ ಇಕ್ಬಾಲ್ ಅವರೇ ಮುಂದೆ ಬಂದು ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಧರ್ಮದ ಗಡಿಗಳನ್ನು ಮೀರಿ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿದ ಈ ನಡೆ ಸ್ಥಳೀಯರು ಸೇರಿದಂತೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
“ಧರ್ಮಗಳು ಮನುಷ್ಯರನ್ನು ಬೇರ್ಪಡಿಸಬಹುದು; ಆದರೆ ಮಾನವೀಯತೆ ಎಲ್ಲರನ್ನೂ ಒಂದಾಗಿಸುತ್ತದೆ” ಎಂಬ ಸಂದೇಶವನ್ನು ಈ ಘಟನೆ ಸಮಾಜಕ್ಕೆ ಸಾರಿದ್ದು, ಸೌಹಾರ್ದ, ಸಹಬಾಳ್ವೆ ಮತ್ತು ಪರಸ್ಪರ ಗೌರವದ ಜೀವಂತ ಉದಾಹರಣೆಯಾಗಿ ಮೂಡಿಬಂದಿದೆ.





