ಪುತ್ತೂರು, ಜೂನ್ 6: ಪುತ್ತೂರು ವಿಧಾನಸಭಾ ಕ್ಷೇತ್ರದ ಜನತಾದಳ (ಜಾತ್ಯತೀತ) ಪಕ್ಷದ ಪ್ರಮುಖರ ಸಭೆಯು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಬೋಳ್ವಾರಿನ ದುರ್ವ ಕಾಂಪ್ಲೆಕ್ಸ್ನ ನೆಮ್ಮದಿ ವೆಲ್ನೆಸ್ ಸೆಂಟರ್ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರಾಧ್ಯಕ್ಷರಾದ ಅಸ್ರಫ್ ಕಲ್ಲೇಗ ವಹಿಸಿದ್ದರು.
ಹಿಂದುಳಿದ ವರ್ಗದ ಜಿಲ್ಲಾದ್ಯಕ್ಷ ಪ್ರಭಾಕರ್ ಸಾಲಿಯಾನ್ ಪ್ರಸ್ತಾವಿಕ ಬಾಷಣ ಮಾಡಿದರು. ಸಭೆಯಲ್ಲಿ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಜಾಕೆ ಮಾಧವ ಗೌಡ ಅವರು ಮಾತನಾಡಿ, ಪಕ್ಷದ ಸಂಘಟನೆಯನ್ನು ಗ್ರಾಮ ಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು. ಪಕ್ಷದ ತತ್ವ, ಸಿದ್ಧಾಂತ ಹಾಗೂ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮೂಲಕ ಪಕ್ಷದ ನೆಲೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.

ಮಾಜಿ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞ ಅವರು ಮಾತನಾಡಿ, ಪಕ್ಷದ ಸಂಘಟನೆಗೆ ಪ್ರತಿಯೊಬ್ಬ ಕಾರ್ಯಕರ್ತನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಧ್ವನಿಯಾಗಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಇನ್ನಷ್ಟು ಜನರ ಹತ್ತಿರ ಕೊಂಡೊಯ್ಯಬೇಕಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು ಅವರು ಮಾತನಾಡಿ, ಕರಾವಳಿ ಭಾಗದ ಜನರ ಸಮಸ್ಯೆಗಳು, ರೈತರ ಸಂಕಷ್ಟಗಳು, ಯುವಜನರ ಉದ್ಯೋಗ ಸಮಸ್ಯೆ ಸೇರಿದಂತೆ ವಿವಿಧ ಜನಪರ ವಿಚಾರಗಳಲ್ಲಿ ಪಕ್ಷ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ, ಬೂತ್ ಮಟ್ಟದ ಸಂಘಟನೆ ಹಾಗೂ ಜನಸಂಪರ್ಕ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಜಿ ಅದ್ಯಕ್ಷ ಐ.ಸಿ ಕೈಲಾಸ್ ಗೌಡ, ಮಾಜಿ ಮಹಿಳಾದ್ಯಕ್ಷೆ ಪದ್ಮಮಣಿ, ಜಿಲ್ಲಾ ಕಾರ್ಯದರ್ಶಿ ಪ್ರಿಯಾ ಸಾಲಿಯಾನ್, ಶಿವ ಸಾಲಿಯಾನ್. , ಜಯರಾಜ್ ಅಮೀನ್ ವಿವಿಧ ಭಾಗಗಳಿಂದ ಆಗಮಿಸಿದ್ದ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲವರ್ಧನೆ, ಹೊಸ ಸದಸ್ಯರ ಸೇರ್ಪಡೆ, ಸ್ಥಳೀಯ ಸಮಸ್ಯೆಗಳ ಕುರಿತು ಹೋರಾಟ ರೂಪಿಸುವುದು ಹಾಗೂ ಮುಂಬರುವ ರಾಜಕೀಯ ಬೆಳವಣಿಗೆಗಳಿಗೆ ಸಜ್ಜಾಗುವ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು.

ಪಕ್ಷದ ಬೆಳವಣಿಗೆಗೆ ಎಲ್ಲರೂ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಸಂಘಟನಾತ್ಮಕ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಪಕ್ಷದ ವಿವಿಧ ಹಂತದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.






