ಮಂಗಳೂರು, ಮೇ 25: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನಿಯೋಗವು ಇಂದು ಸಂಸ್ಥೆಯ ಅಧ್ಯಕ್ಷರಾದ ಅಲ್ ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ಅವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ, ಮುಂಬರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳು ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತು.
ನಿಯೋಗವು ಬಕ್ರೀದ್ ಹಬ್ಬದ ದಿನ ಹಾಗೂ ನಂತರದ ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ವಿಧಿ ವಿಧಾನಗಳು, ಪ್ರಾಣಿ ಬಲಿ ಅರ್ಪಣೆ ಸೇರಿದಂತೆ ಇಸ್ಲಾಮಿಕ್ ಸಂಪ್ರದಾಯಗಳನ್ನು ಕಾನೂನುಬದ್ಧವಾಗಿ ಹಾಗೂ ಶಾಂತಿಯುತವಾಗಿ ನೆರವೇರಿಸಲು ಸೂಕ್ತ ಭದ್ರತೆ ಮತ್ತು ಸಹಕಾರ ಒದಗಿಸಬೇಕೆಂದು ಅಧಿಕಾರಿಗಳ ಗಮನಕ್ಕೆ ತಂದಿತು.
ಈ ಸಂದರ್ಭ ಮಾತನಾಡಿದ ಕಮಿಟಿ ಪ್ರತಿನಿಧಿಗಳು, ಜಿಲ್ಲೆಯಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿದ್ದು, ಎಲ್ಲ ಸಮುದಾಯಗಳ ಸಹಕಾರದೊಂದಿಗೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು. ಯಾವುದೇ ರೀತಿಯ ಗೊಂದಲ, ವದಂತಿ ಅಥವಾ ಅಶಾಂತಿ ಉಂಟಾಗದಂತೆ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಪೊಲೀಸ್ ಅಧಿಕಾರಿಗಳು ಸಹ ಮನವಿಯನ್ನು ಸ್ವೀಕರಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಹಾಗೂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ನಿಯೋಗದಲ್ಲಿ ಉಪಾಧ್ಯಕ್ಷರಾದ ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಬಿ.ಎಸ್. ಇಂತಿಯಾಝ್, ಅಬ್ಬಾಸ್ ಉಚ್ಚಿಲ್, ಇಕ್ಬಾಲ್ ಅಹಮದ್ ಮುಲ್ಕಿ, ಶಂಸುದ್ದೀನ್ ಬಂದರ್, ಎಂ. ಅನ್ವರ್ ರೀಕೊ, ನಾಸೀರ್ ಯಾದ್ಗಾರ್, ಮೊಹಮ್ಮದ್ ಸಲೀಂ ಮನ್ನತ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.




