ಮಂಗಳೂರು, ಮೇ 23: ಉಳ್ಳಾಲ ತಾಲೂಕು ತೊಕ್ಕೊಟ್ಟು ಬಟ್ನಗರದಲ್ಲಿರುವ ನೇತಾಜಿ-ಎ ಯಲ್ಲಪ್ಪ ಮೆಮೋರಿಯಲ್ ಹಾಸ್ಪಿಟಲ್ ಎದುರಿನ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ದಿನನಿತ್ಯ ಹೆಚ್ಚುತ್ತಿರುವ ಅನಧಿಕೃತ ವಾಹನ ಪಾರ್ಕಿಂಗ್ ಸಮಸ್ಯೆಯನ್ನು ತಡೆಗಟ್ಟುವಂತೆ ಆಗ್ರಹಿಸಿ ಆಸ್ಪತ್ರೆ ಮುಖ್ಯಸ್ಥರು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಪ್ರತಿನಿಧಿಗಳು ಶನಿವಾರ 23-05-2026 ರಂದು ಬೆಳ್ಳಿಗೆ 10 ಗಂಟೆಗೆ ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ಆಸ್ಪತ್ರೆಯ ಮುಖ್ಯಸ್ಥರಾದ ಪ್ರಭಾಕರ್ ಅವರು ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಸಮಸ್ಯೆಯ ಗಂಭೀರತೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ಮನವಿ ಪತ್ರ ಸಲ್ಲಿಸಿದ್ದು
ತೊಕ್ಕೊಟ್ಟು ಭಾಗದಲ್ಲಿರುವ ನೇತಾಜಿ-ಎ ಯಲ್ಲಪ್ಪ ಮೆಮೋರಿಯಲ್ ಹಾಸ್ಪಿಟಲ್ ಕರಾವಳಿ ಭಾಗದ ಅನೇಕ ಜನರಿಗೆ ತುರ್ತು ಹಾಗೂ ಸಾಮಾನ್ಯ ಆರೋಗ್ಯ ಸೇವೆಗಳನ್ನು ನೀಡುತ್ತಿರುವ ಪ್ರಮುಖ ಆಸ್ಪತ್ರೆಯಾಗಿದ್ದು, ಆಸ್ಪತ್ರೆ ಎದುರಿನ ಸರ್ವಿಸ್ ರಸ್ತೆಯಲ್ಲಿ ಕಾರುಗಳು, ಲಾರಿಗಳು, ಆಟೋ ರಿಕ್ಷಾಗಳು ಸೇರಿದಂತೆ ವಿವಿಧ ವಾಹನಗಳನ್ನು ನಿಯಮಬಾಹಿರವಾಗಿ ನಿಲ್ಲಿಸಲಾಗುತ್ತಿರುವುದರಿಂದ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಅನಧಿಕೃತ ವಾಹನ ನಿಲುಗಡೆಯಿಂದಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳು, ವೃದ್ಧರು, ಮಹಿಳೆಯರು, ಮಕ್ಕಳು ಹಾಗೂ ತುರ್ತು ಚಿಕಿತ್ಸೆಗೆ ಬರುವ ಸಾರ್ವಜನಿಕರು ಆಸ್ಪತ್ರೆಗೆ ಸುಲಭವಾಗಿ ಪ್ರವೇಶಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಆಂಬುಲೆನ್ಸ್ ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ರಸ್ತೆಯ ಎರಡೂ ಬದಿಗಳಲ್ಲಿಯೂ ಅಸಮರ್ಪಕವಾಗಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಮನವಿಯಲ್ಲಿ ಒತ್ತಿಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ತಕ್ಷಣ ಕೆಳಕಂಡ ಕ್ರಮಗಳನ್ನು ಜಾರಿಗೊಳಿಸುವಂತೆ ಮನವಿ ಮಾಡಲಾಗಿದೆ:
• ಆಸ್ಪತ್ರೆ ಎದುರಿನ ಸರ್ವಿಸ್ ರಸ್ತೆಯಲ್ಲಿ ಅನಧಿಕೃತ ವಾಹನ ಪಾರ್ಕಿಂಗ್ ಸಂಪೂರ್ಣ ನಿಷೇಧಿಸುವುದು.
• “NO PARKING” ಸೂಚನಾ ಫಲಕಗಳನ್ನು ಅಳವಡಿಸುವುದು.
• ನಿಯಮ ಉಲ್ಲಂಘಿಸಿ ವಾಹನ ನಿಲ್ಲಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು.
• ಆಸ್ಪತ್ರೆ ಪ್ರವೇಶ ದ್ವಾರದ ಸುತ್ತಮುತ್ತ ಪೊಲೀಸ್ ನಿಗಾವಹಿಸಿ ಸಂಚಾರ ಸುಗಮಗೊಳಿಸುವುದು.
• ಆಂಬುಲೆನ್ಸ್ ಹಾಗೂ ತುರ್ತು ಚಿಕಿತ್ಸಾ ವಾಹನಗಳ ನಿರ್ವಿಘ್ನ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು.
ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ರೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವಂತೆ ಪೊಲೀಸ್ ಇಲಾಖೆಯನ್ನು ಮನವಿಯಲ್ಲಿ ವಿನಂತಿಸಲಾಗಿದೆ.

