ಮಂಗಳೂರು: Mangaluru City Corporation ವ್ಯಾಪ್ತಿಯ 51ನೇ ಅಳಪೆ ಉತ್ತರ ವಾರ್ಡಿನ ಕನ್ನಗುಡ್ಡೆಯ ಸಂತೋಷ್ ಅವರ ಮನೆಯ ಸಮೀಪದ ರಾಜಕಾಲುವೆ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗಾಗಿ ಸುಮಾರು ₹10 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿತು.
ಕನ್ನಗುಡ್ಡೆ ಪ್ರದೇಶವು ಎತ್ತರ ಪ್ರದೇಶವಾಗಿರುವುದರಿಂದ ಮಳೆಗಾಲ ಹಾಗೂ ಪ್ರಕೃತಿಕ ವಿಕೋಪಗಳ ಸಂದರ್ಭದಲ್ಲಿ ಭೂ ಕುಸಿತ ಮತ್ತು ನೀರಿನ ಹರಿವಿನಿಂದ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಮಳೆಗಾಲದ ವೇಳೆ ರಾಜಕಾಲುವೆ ಭಾಗ ಕುಸಿತಗೊಂಡು ಸಾರ್ವಜನಿಕರಿಗೆ ಹಾಗೂ ಸುತ್ತಮುತ್ತಲಿನ ಮನೆಗಳಿಗೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ.
ಈ ಕಾಮಗಾರಿಯಿಂದ ರಾಜಕಾಲುವೆ ಬದಿಯ ಭೂ ಕುಸಿತ ತಡೆಯಲ್ಪಡುವುದರ ಜೊತೆಗೆ ಮಳೆ ನೀರಿನ ಸರಿಯಾದ ಹರಿವಿಗೆ ಸಹಕಾರಿಯಾಗಲಿದೆ. ಅಲ್ಲದೆ ಸುತ್ತಮುತ್ತಲಿನ ಮನೆಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೂ ಹೆಚ್ಚಿನ ಭದ್ರತೆ ಒದಗಿಸುವ ನಿರೀಕ್ಷೆಯಿದೆ. ಸ್ಥಳೀಯರು ಈ ಅಭಿವೃದ್ಧಿ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿ, ಮಳೆಗಾಲದ ಮುನ್ನವೇ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರವೀಣ್ ನಿಡ್ಡೇಲ್, ಸುರೇಶ್ ಆಚಾರ್, ಸುರೇಶ್ ಕನ್ನಗುಡ್ಡ, ದೀಕ್ಷಿತ್ ಕನ್ನಗುಡ್ಡ, ಕಿಶೋರ್, ಗಣೇಶ್, ವಿವೇಕ್, ವಿಜಯ್, ಸುಧೇಶ್, ದೀಕ್ಷಿತ್ ಅರ್ಲಬೆಟ್ಟು, ಕವಿರಾಜ್, ದಾಮೋದರ್ ಸೇರಿದಂತೆ ಅನೇಕ ಗಣ್ಯರು, ಸ್ಥಳೀಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





