ಮಂಗಳೂರು: ಕಾವೂರಿನ ಮಾಲಾಡಿಕೋರ್ಟ್ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾವೂರು ಬಂಟರ ಸಂಘದ ಬಹುನಿರೀಕ್ಷಿತ “ಬಂಟರ ಭವನ” ಜನವರಿ 20, 2027ರಂದು ಭವ್ಯವಾಗಿ ಉದ್ಘಾಟನೆಯಾಗಲಿದ್ದು, ಅದರ ಅಂಗವಾಗಿ ಪೂರ್ವ ಸಿದ್ಧತಾ ಸಭೆ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅವರು, ಬಂಟರ ಭವನವು ಸಮುದಾಯದ ಹೆಮ್ಮೆಯ ಪ್ರತೀಕವಾಗಿದ್ದು, ಉದ್ಘಾಟನಾ ಸಮಾರಂಭವನ್ನು ಸಂಘಟಿತ ರೀತಿಯಲ್ಲಿ ನಡೆಸಿ ಯಶಸ್ವಿಗೊಳಿಸಲು ಎಲ್ಲ ಸದಸ್ಯರು ಹಾಗೂ ಸಮಾಜ ಬಾಂಧವರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಮುಗೇರೋಡಿ ಡಿ. ಸುಧಾಕರ ಶೆಟ್ಟಿ ಮಾತನಾಡಿ, ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಭವನವು ಅಂತಿಮ ಹಂತ ತಲುಪಿದೆ ಎಂದರು. ಕಳೆದ ಎರಡು ವರ್ಷಗಳಿಂದ ಸಮಿತಿಯ ನಿರಂತರ ಪರಿಶ್ರಮ, ದಾನಿಗಳ ಸಹಕಾರ ಹಾಗೂ ಸಮುದಾಯದ ಬೆಂಬಲದಿಂದ ಈ ಮಹತ್ವಾಕಾಂಕ್ಷಿ ಯೋಜನೆ ಸಾಕಾರಗೊಳ್ಳುತ್ತಿದೆ ಎಂದು ಹೇಳಿದರು.
ಸುಮಾರು 1,300 ಆಸನ ಸಾಮರ್ಥ್ಯದ ಹವಾ ನಿಯಂತ್ರಿತ ಸಭಾಂಗಣ, ಪ್ರತ್ಯೇಕ ಊಟೋಪಚಾರ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ಪೂಜಾ ಮಂದಿರ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ಭವನವು ಸಮಾಜದ ವಿವಿಧ ಕಾರ್ಯಕ್ರಮಗಳಿಗೆ ಕೇಂದ್ರಬಿಂದುವಾಗಲಿದೆ ಎಂದು ವಿವರಿಸಿದರು.
ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಶೆಟ್ಟಿ ಸರಪಾಡಿ ಮಾತನಾಡಿ, ಕಾವೂರು ಬಂಟರ ಸಂಘವು ಸಮಾಜಮುಖಿ ಕಾರ್ಯಗಳ ಮೂಲಕ ಬೆಳೆದು ಬಂದಿರುವ ಹಾದಿಯನ್ನು ಸ್ಮರಿಸಿ, ಮುಂದಿನ ಕಾರ್ಯಕ್ರಮಗಳ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮತಿ ಪ್ರೇಮಾ ಕೆ. ಶೆಟ್ಟಿ ಚಿಪ್ಪಾರುಗುತ್ತು ಅವರು ಕಟ್ಟಡ ನಿರ್ಮಾಣಕ್ಕಾಗಿ 1 ಲಕ್ಷ ರೂಪಾಯಿ ದೇಣಿಗೆಯನ್ನು ಸಮಿತಿಗೆ ಹಸ್ತಾಂತರಿಸಿದರು.
ಸಭೆಯಲ್ಲಿ ವಿಠಲ್ ಆಳ್ವ, ಲಕ್ಷ್ಮೀನಾರಾಯಣ ಶೆಟ್ಟಿ, ಶಂಭು ಶೆಟ್ಟಿ, ರೇಖಾ ವಿ. ಶೆಟ್ಟಿ, ಸುಧಾಕರ ಆಳ್ವ ಹಾಗೂ ಅವಿನಾಶ್ ನಾಯಕ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಶಂಭು ಶೆಟ್ಟಿ ಲೆಕ್ಕಪತ್ರ ಮಂಡಿಸಿದರು.




