ಕಾರ್ಕಳ, ಮೇ 5: ಆಯುರ್ವೇದ ಚಿಕಿತ್ಸೆಯ ಹೆಸರಿನಲ್ಲಿ ಭಾರೀ ವಂಚನೆ ನಡೆದಿರುವ ಆಘಾತಕಾರಿ ಘಟನೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ರೋಗಿಣಿಯ ಗಂಭೀರ ಆರೋಗ್ಯ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ವೃದ್ಧ ವ್ಯಕ್ತಿಯಿಂದ ಲಕ್ಷಾಂತರ ರೂಪಾಯಿ ದೋಚಿರುವ ಪ್ರಕರಣ ಇದೀಗ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಬೆಳ್ಮಣ್ ಗ್ರಾಮದ ನಿವಾಸಿಯಾದ 68 ವರ್ಷದ ರೊನಾಲ್ಡ್ ರೋಡ್ರಿಗಸ್ ಅವರು ನೀಡಿದ ದೂರಿನ ಪ್ರಕಾರ, ಅವರ ಪತ್ನಿ ರೋಸಿ ಅವರು ಕ್ಯಾನ್ಸರ್ ಹಾಗೂ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ 2026ರ ಮಾರ್ಚ್ 23ರಂದು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಸಿದ್ದಾರ್ಥ್ ಎಂಬಾತ ಪರಿಚಯವಾಗಿದ್ದು, ತನ್ನ ತಾಯಿ ಇದೇ ರೀತಿಯ ಕಾಯಿಲೆಯಿಂದ ಆಯುರ್ವೇದ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ ಎಂದು ನಂಬಿಕೆ ಮೂಡಿಸಿದ್ದಾನೆ.
ಈ ನಂಬಿಕೆಯನ್ನು ಬಲಪಡಿಸಲು ಸಿದ್ದಾರ್ಥ್, ಮಾಧವ ಎಂಬಾತನ ಸಂಪರ್ಕ ನೀಡಿ, ದುಬಾರಿ ಆಯುರ್ವೇದ ಚಿಕಿತ್ಸೆ ಅಗತ್ಯವಿದೆ ಎಂದು ಹೇಳಿ ಹಣ ವರ್ಗಾವಣೆ ಮಾಡಲು ಪ್ರೇರೇಪಿಸಿದ್ದಾನೆ. ಪ್ರಾರಂಭದಲ್ಲಿ ಗೂಗಲ್ ಪೇ ಮೂಲಕ ಅನಿಲ್ ಪವಾರ್ ಹೆಸರಿನ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದ್ದು, ಬಳಿಕ ₹40,000 ನಗದು ರೂಪದಲ್ಲಿ ಸಿದ್ದಾರ್ಥ್ಗೆ ನೀಡಲಾಗಿದೆ.
ಅದಾದ ಬಳಿಕ ಉಡುಪಿಯ ಮಾಂಡವಿ ಬಿಲ್ಡಿಂಗ್ನಲ್ಲಿರುವ ಆಯುರ್ವೇದ ಔಷಧಿ ಅಂಗಡಿಗೆ ಕರೆದುಕೊಂಡು ಹೋಗಿ, ಅನಿಲ್ ಎಂಬಾತನ ಪರಿಚಯ ಮಾಡಿಸಿ, ಔಷಧಿಗಳ ಮೂಲಕ ಸಂಪೂರ್ಣ ಗುಣಮುಖತೆ ಸಾಧ್ಯವೆಂದು ಭರವಸೆ ನೀಡಲಾಗಿದೆ. ಈ ಭರವಸೆಗೆ ಮೋಸಹೋದ ಪಿರ್ಯಾದಿದಾರರಿಂದ ವಿವಿಧ ಚೆಕ್ಗಳ ಮೂಲಕ ಒಟ್ಟು ₹10,80,000 ಹಣ ವಸೂಲಿಸಲಾಗಿದೆ.
ಆದರೆ ನೀಡಿದ ಔಷಧಿಗಳನ್ನು ಬಳಸಿದರೂ ಯಾವುದೇ ಫಲಿತಾಂಶ ಕಾಣಿಸದ ಹಿನ್ನೆಲೆಯಲ್ಲಿ ಆರೋಪಿಗಳ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಫೋನ್ ಸಂಖ್ಯೆಗಳು ಸ್ವಿಚ್ ಆಫ್ ಆಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಪಿರ್ಯಾದಿದಾರರು ಪೊಲೀಸರಿಗೆ ದೂರು ನೀಡಿದ್ದಾರೆ.
ಒಟ್ಟು ₹12,09,160 ಹಣ ವಂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ZERO FIR ನಂ. 01/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(2), 318(4) ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ.
👉 ಆರೋಗ್ಯ ಸಂಕಷ್ಟದಲ್ಲಿರುವವರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ವಂಚನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
