ಸುಳ್ಯ: ದಿನಾಂಕ 25-04-2026 :ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಅನುಸರಿಸುತ್ತಿರುವ ನೀತಿಯನ್ನು ವಿದ್ಯಾರ್ಥಿ ಜನತಾದಳ (ಜ್ಯಾ) ದಕ್ಷಿಣ ಕನ್ನಡ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಲೋಕಸಭೆಯಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿರುವ ಘಟಕ, ದೇಶದ ಮಹಿಳೆಯರಿಗೆ ನ್ಯಾಯಸಮ್ಮತ ಹಕ್ಕು ನೀಡುವಂತಹ ಮಹತ್ವದ ವಿಷಯದಲ್ಲಿ ರಾಜಕೀಯ ಭೇದಭಾವ ಬದಿಗಿಟ್ಟು ಬೆಂಬಲಿಸಬೇಕಾಗಿದ್ದ ವಿರೋಧ ಪಕ್ಷಗಳು ಅನಾವಶ್ಯಕ ಕಾರಣಗಳನ್ನು ಮುಂದಿಟ್ಟು ಮಸೂದೆಗೆ ಅಡ್ಡಿಪಡಿಸುತ್ತಿರುವುದು ವಿಷಾದನೀಯ ಎಂದಿದೆ.
ಎನ್ಡಿಎ ಸರ್ಕಾರ ಮಹಿಳಾ ಮೀಸಲಾತಿಯನ್ನು ಕೇವಲ ಘೋಷಣೆಯಾಗಿ ಉಳಿಸದೆ, ಕಾನೂನುಬದ್ಧಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆದರೆ ಅಧಿಕಾರದಲ್ಲಿದ್ದಾಗ ಈ ವಿಷಯವನ್ನು ಕಡೆಗಣಿಸಿದ್ದ ಕಾಂಗ್ರೆಸ್, ಈಗ ಮಸೂದೆ ಜಾರಿಗೆ ಬರುವ ಹಂತದಲ್ಲಿ ವಿಳಂಬ ಮಾಡುತ್ತಿರುವುದು ಮಹಿಳಾ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ಟೀಕಿಸಿದೆ.
ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡ ಅವರು ತಮ್ಮ ಆಡಳಿತಾವಧಿಯಲ್ಲಿ 33% ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದನ್ನು ಸ್ಮರಿಸಿರುವ ಘಟಕ, ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ಸಾಧನೆಯೂ ಅವರದೇ ಎಂದು ತಿಳಿಸಿದೆ.
ಮಹಿಳೆಯರು ಜನಸಂಖ್ಯೆಯ ಅರ್ಧಭಾಗವಾಗಿದ್ದರೂ ಸಂಸತ್ತಿನಲ್ಲಿ ಕೇವಲ ಸುಮಾರು 14% ಮಾತ್ರ ಪ್ರತಿನಿಧ್ಯ ಸಿಕ್ಕಿದೆ. 33% ಮೀಸಲಾತಿ ಜಾರಿಗೆ ಬಂದರೆ ಸಮಾನ ಪಾಲ್ಗೊಳ್ಳುವಿಕೆ ಸಾಧ್ಯವಾಗಲಿದೆ. ಜೊತೆಗೆ, ಜನಸಂಖ್ಯೆ ಹೆಚ್ಚಿದರೂ ಸಂಸದೀಯ ಸ್ಥಾನಗಳು ಏರಿಕೆಯಾಗದಿರುವುದರಿಂದ ಪ್ರತಿನಿಧಿತ್ವ ದುರ್ಬಲವಾಗಿದೆ ಎಂದು ಹೇಳಿದೆ.
ಪ್ರಜಾಪ್ರಭುತ್ವ ಬಲವರ್ಧನೆಗೆ ಜನಪ್ರತಿನಿಧಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯ. ಹೊಸ ಸಂಸತ್ ಭವನವನ್ನು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟು ನಿರ್ಮಿಸಲಾಗಿದೆ. ದಶಕಗಳಿಂದ ಬಾಕಿ ಇರುವ ಈ ಮಸೂದೆಯನ್ನು ಜಾರಿಗೆ ತರಲು ಅಡ್ಡಿಪಡಿಸುವುದು ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮಹಿಳಾ ಸಬಲೀಕರಣ ಹಾಗೂ ಸಮಾನ ಪ್ರಾತಿನಿಧ್ಯಕ್ಕಾಗಿ ಈ ಮಸೂದೆ ಅತ್ಯಗತ್ಯವಾಗಿದ್ದು, ವಿರೋಧ ಪಕ್ಷಗಳು ರಚನಾತ್ಮಕ ನಿಲುವು ತಾಳಬೇಕು ಎಂದು ವಿದ್ಯಾರ್ಥಿ ಜನತಾದಳ (ಜ್ಯಾ) ಜಿಲ್ಲಾ ಅಧ್ಯಕ್ಷ ನಿಹಾಲ್ ಕೋಡ್ತುಗೋಳಿ ಆಗ್ರಹಿಸಿದ್ದಾರೆ.

