ಕರಂಬಾರು: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ, ಕರಂಬಾರು ವತಿಯಿಂದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ಭವ್ಯವಾಗಿ ನಡೆಯಿತು. ವಿವಿಧ ಸಮಾಜಮುಖಿ ಕಾರ್ಯಗಳಿಂದ ಹೆಸರಾಗಿರುವ ಸಮಿತಿಯ ಈ ಕಾರ್ಯಕ್ರಮಕ್ಕೆ ಸ್ಥಳೀಯ ಗಣ್ಯರು ಸಾಕ್ಷಿಯಾದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಮಾತನಾಡಿ, ನಾಗರಿಕ ಸೇವಾ ಸಮಿತಿಯು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರಮವನ್ನು ಪ್ರಶಂಸಿಸಿದರು. “ಇದು ಸಮಾಜಕ್ಕೆ ಮಾದರಿ ಸಂಘವಾಗಿದ್ದು, ಇಂತಹ ಸಂಘಟನೆಗಳು ಇನ್ನಷ್ಟು ಬೆಳೆಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಜಪೆ ಬಂಟರ ಸಂಘದ ಅಧ್ಯಕ್ಷರಾದ ವೇಣುಗೋಪಾಲ್ ಶೆಟ್ಟಿ ಅವರನ್ನು ಸಮಾಜ ಸೇವೆಯ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಅವರು ಮಾತನಾಡಿ, ನಾಗರಿಕ ಸೇವಾ ಸಮಿತಿಯ ಸೇವಾಕಾರ್ಯಗಳನ್ನು ಮೆಚ್ಚಿ, ವಿಶೇಷವಾಗಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರಗಳ ಮೂಲಕ ಜನರಿಗೆ ನೀಡುತ್ತಿರುವ ಸೇವೆಯನ್ನು ಕೊಂಡಾಡಿದರು.
ಕಾರ್ಯಕ್ರಮಕ್ಕೆ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರಾದ ಭೋಜರಾಜ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಜಪೆ ಪಟ್ಟಣ ಪಂಚಾಯತ್ ಸದಸ್ಯರಾದ ರಾಜೇಶ್ ಅಮೀನ್, ದಿನೇಶ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ, ಮಳವೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ನಾರಾಯಣ ಬೋಧಿ, ಎಸ್ಡಿಎಂಸಿ ಅಧ್ಯಕ್ಷರಾದ ಗುಣಪಾಲ್ ದೇವಾಡಿಗ, ವಾಸು ಪೇಜಾವರ್ ಹಾಗೂ ರುಕ್ಕಯ್ಯ ಕೋಟ್ಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಮಾರಿ ಕೃತಿ ಬಿ.ಕೆ ನಿರೂಪಿಸಿದರು. ವೀಣಾ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾ ಮಿಥುನ್ ಸ್ವಾಗತಿಸಿ, ರಾಕೇಶ್ ಕುಂದರ್ ವಂದಿಸಿದರು.


