ಆತ್ಮಶಕ್ತಿ ಮಾಡೂರು ಶಾಖೆಯಲ್ಲಿ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಹಾಗೂ ದಂತ ಚಿಕಿತ್ಸೆ ಶಿಬಿರ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಮಾದೂರು ಶಾಖೆಯ 14ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಶಿರಡಿ ಸಾಯಿ ಬಾಬಾ ಮಂದಿರ (ರಿ.) ಮಾಡೂರು, ಶ್ರೀ ಶಾಸ್ತಾರ ಬಳಗ (ರಿ.), ಶ್ರೀ ಶಾಸ್ತಾರ ಮಹಿಳಾ ಮಂಡಳಿ ಹಾಗೂ ಭಜಕ ವೃಂದ, ಮಡ್ಯಾರ್ ಹಾಗೂ ಎನ್.ಜಿ.ಒ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇವರ ಸಂಯುಕ್ತ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ, ದೇರಳಕಟ್ಟೆ ಹಾಗೂ ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೊಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯ ತಂಡದವರಿಂದ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸೆ ಶಿಬಿರವು ಮಾಡೂರು ಶಾಖೆಯ ಆವರಣದಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೊಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇಲ್ಲಿನ ವೈದ್ಯರಾದ ಡಾ| ಇಮ್ರಾನ್ ಪಾಶಾ ಉದ್ಘಾಟಿಸಿ ಮಾತನಾಡಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸತತವಾಗಿ ನೂರಕ್ಕೂ ಹೆಚ್ಚು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ, ಸಮಾಜದ ಎಲ್ಲಾ ಜನರಿಗೆ ಉಚಿತ ಸೇವೆಯನ್ನು ಒದಗಿಸುತ್ತಿದೆ. ಒಂದೇ ದಿನದಲ್ಲಿ ಮಾಡೂರು ಮತ್ತು ಕಸಿಹಿತ್ಲು, ಜಪ್ಪಿನಮೊಗರುಗಳಲ್ಲಿ ಆಯೋಜಿಸಿರುವುದು ಸಂಘದ ವಿಶೇಷತೆ. ಜನಸಾಮಾನ್ಯರು ತಮ್ಮ ಆರೋಗ್ಯದ ಕಾಳಜಿಯನ್ನು ತೆಗೆದುಕೊಳ್ಳಬೇಕು ಹಾಗೂ ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿ, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಯ ಹಸಿರು ಕಾರ್ಡ್ ನೀಡಲಾಗುವುದು. ಶಿಬಿರಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬೇಕು” ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರು ಮಾತನಾಡಿ, ಆತ್ಮಶಕ್ತಿ ಸಂಘವು ಕಳೆದ 14 ವರ್ಷಗಳಿಂದ ವೈದ್ಯಕೀಯ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಿದ್ದು, ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು. ಸಂಘವು 2025-26ನೇ ಸಾಲಿನಲ್ಲಿ ರೂ. 305 ಕೋಟಿಗೂ ಹೆಚ್ಚು ಠೇವಣಿ, ರೂ. 278 ಕೋಟಿಗೂ ಹೆಚ್ಚು ಸಾಲ ಹಾಗೂ ರೂ. 3.5 ಕೋಟಿಗೂ ಹೆಚ್ಚು ಲಾಭ ಗಳಿಸಿರುವುದು ಸಂಘದ ಪ್ರಗತಿಗೆ ಕಾರಣವಾಗಿದೆ ಎಂದು ಹೇಳಿದರು. ಸಂಘದ 105ನೇ ಉಚಿತ ವೈದ್ಯಕೀಯ ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ರಮಾನಾಥ ಸನಿಲ್, ಶ್ರೀ ಗೋಪಾಲ್ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್ ಹಾಗೂ ಶ್ರೀ ಶಾಸ್ತಾರ ಬಳಗದ ಅಧ್ಯಕ್ಷರಾದ ಶ್ರೀ ಸೂರಜ್ ಗಟ್ಟಿ ಕೊಂಡಾಣ, ಶ್ರೀ ಶಾಸ್ತಾರ ಕಟ್ಟೆ ಇದರ ಅರ್ಚಕರಾದ ಶ್ರೀ ಯೋಗೀಶ್ ಪೂಜಾರಿ, ಶ್ರೀ ವನದುರ್ಗ ಅಯ್ಯಪ್ಪ ಭಜನ ಮಂದಿರದ ಗುರುಸ್ವಾಮಿಯಾದ ಶ್ರೀ ಭಾಸ್ಕರ್, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರದ ವೈದ್ಯರಾದ ಡಾ| ಆಯಿಷಾ ಮತ್ತಿತರರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಸುಮಾರು 100ಕ್ಕೂ ಹೆಚ್ಚು ಶಿಬಿರಾರ್ಥಿಗಳು ವೈದ್ಯಕೀಯ ಸೇವೆಯ ಪ್ರಯೋಜನವನ್ನು ಪಡೆದರು.
ಮಾಡೂರು ಶಾಖೆಯ ಪ್ರಭಾರ ಶಾಖಾಧಿಕಾರಿಯಾದ ಶ್ರೀಮತಿ ಭವ್ಯ ಅವರು ಸ್ವಾಗತಿಸಿದರು. ಸಂಘದ ಸಿಬ್ಬಂದಿ ಕುಮಾರಿ ರತಿಕಾ ಅವರು ವಂದಿಸಿದರು. ಸಂಘದ ಒಳಾಳ ಶಾಖೆಯ ಹಿರಿಯ ಶಾಖಾಧಿಕಾರಿಯಾದ ಶ್ರೀ ಸಚಿನ್ ಅವರು ನಿರೂಪಿಸಿದರು.





