ಕಾರ್ಕಳ : ಕಾರ್ಕಳ ಜನತಾದಳ (ಜಿಡಿಎಸ್) ವಿಧಾನಸಭಾ ಕ್ಷೇತ್ರ ಹಾಗೂ ಹೆಬ್ರಿ ತಾಲೂಕು, ಉಡುಪಿ ಜಿಲ್ಲೆ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜಿಡಿಎಸ್ ಪಕ್ಷದ 25ನೇ ವರ್ಷದ ರಜತ ಮಹೋತ್ಸವವನ್ನು ಏಪ್ರಿಲ್ 4, 2026ರಂದು ಶನಿವಾರ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಈ ಮಹೋತ್ಸವ ಕಾರ್ಯಕ್ರಮವು ಹೆಬ್ರಿ ಸಮೀಪದ ಪರಿಮಳ ಲೇಔಟ್, ಮದಗ ಕುಚ್ಚೂರು ರಸ್ತೆಯಲ್ಲಿ ಸಂಜೆ 6.00 ಗಂಟೆಗೆ ಆರಂಭವಾಗಲಿದ್ದು, ರಾತ್ರಿ 8.00 ಗಂಟೆಗೆ ಪ್ರಮುಖ ಸಭಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮ ಸ್ಥಳದಲ್ಲಿ ವಿಶಾಲ ವೇದಿಕೆ, ಸಭಾ ವ್ಯವಸ್ಥೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಯುವ ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ ಜಿಡಿಎಸ್ ಶಾಸಕಾಂಗ ಪಕ್ಷದ ನಾಯಕರು ಶ್ರೀ ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ಎಲ್. ಭೋಜೇಗೌಡ, ಮಾಜಿ ಸಚಿವರು ಹಾಗೂ ಮಾಜಿ ಸಂಸದರಾದ ಶ್ರೀ ಸಿ.ಎಸ್. ಪುಟ್ಟರಾಜು, ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿ.ಕೆ. ಕೃಷ್ಣ ರೆಡ್ಡಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ತಿಪ್ಪೇಸ್ವಾಮಿ ಮತ್ತು ಶ್ರೀ ಬಿ.ಎಂ. ಫಾರೂಖ್, ಜೆಡಿಎಸ್ ರಾಷ್ಟ್ರೀಯ ವಕ್ತಾರರಾದ ಸುಧಾಕರ್ ಶೆಟ್ಟಿ, ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಸೂರಜ್ ನಾಯ್ಕ್ ಸೋನಿ ಹಾಗೂ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತರಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಸಂಜೆ 6.00 ಗಂಟೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ZEE ಕನ್ನಡ ಕಾಮಿಡಿ ಕಿಲಾಡಿ ತಂಡದಿಂದ ಹಾಸ್ಯ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಇದರ ಜೊತೆಗೆ ಜನಮನ ಸೆಳೆಯುವ ಸೂಪರ್ ಹಿಟ್ ಲೈವ್ ಮ್ಯೂಸಿಕ್ ಕಾರ್ಯಕ್ರಮವೂ ಏರ್ಪಡಿಸಲಾಗಿದೆ.
ಈ ಮಹೋತ್ಸವವು ಪಕ್ಷದ 25 ವರ್ಷಗಳ ಸಾಧನೆಗಳನ್ನು ಸ್ಮರಿಸುವುದರೊಂದಿಗೆ, ಭವಿಷ್ಯದ ಸಂಘಟನಾ ಬಲವರ್ಧನೆಗೆ ಹೊಸ ದಿಕ್ಕು ನೀಡುವ ಉದ್ದೇಶ ಹೊಂದಿದೆ. ಜಿಲ್ಲೆ ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಉಡುಪಿ ಜಿಲ್ಲಾ ಜನತಾದಳದ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಹಾಗೂ ಹೆಬ್ರಿ-ಕಾರ್ಕಳ ಜನತಾದಳ ಅಧ್ಯಕ್ಷರಾದ ಶ್ರೀ ಶ್ರೀಕಾಂತ ಕುಚ್ಚೂರು ಅವರು ಮನವಿ ಮಾಡಿದ್ದಾರೆ.






