ಮಂಗಳೂರು: ವಿದ್ಯಾರ್ಥಿ ಜನತಾದಳದ ಜಿಲ್ಲಾ ಅಧ್ಯಕ್ಷರಾದ ನಿಹಾಲ್ ಎಸ್. ಕೋಡ್ತುಗುಳಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 21-03-2026 ರಂದು ಮಂಗಳೂರಿನ ಕೊಟ್ಟಾರ ಯುವ ಘಟಕ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದ ಮುಂಚೂಣಿಯಲ್ಲಿರುವ ಜಿಲ್ಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಇಲ್ಲಿನ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಸಹಸ್ರಾರು ವಿದ್ಯಾರ್ಥಿ-ಯುವಜನರು ತಮ್ಮ ಭವಿಷ್ಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಯುವಶಕ್ತಿಯನ್ನು ಸಮರ್ಥವಾಗಿ ಸಂಘಟಿಸಿ, ಎಳವೆಯಲ್ಲೇ ಸಾಮಾಜಿಕ ಹಾಗೂ ರಾಜಕೀಯ ಜಾಗೃತಿ ಮೂಡಿಸುವ ಮೂಲಕ ಭವಿಷ್ಯದಲ್ಲಿ ರಾಜ್ಯ ಮತ್ತು ದೇಶಕ್ಕೆ ಸಮರ್ಥ ನಾಯಕರನ್ನು ರೂಪಿಸುವ ಮಹತ್ವಾಕಾಂಕ್ಷಿ ಉದ್ದೇಶವನ್ನು ಹೊಂದಿ ವಿದ್ಯಾರ್ಥಿ ಜನತಾದಳ (ಜಾ) ತನ್ನ ಸಂಘಟನೆಯನ್ನು ಬಲಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ.

ಸಭೆಯಲ್ಲಿ ವಿದ್ಯಾರ್ಥಿ ಸಮುದಾಯವನ್ನು ಸಂಘಟಿಸುವ ವಿವಿಧ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಗ್ರಾಮ ಮಟ್ಟದಿಂದ ಕಾಲೇಜು ಮಟ್ಟದವರೆಗೆ ವಿಸ್ತರಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಚೇತನ್ ಯೋಗಿಶ್ ಶೆಟ್ಟಿ ಅವರ ನೇತೃತ್ವದಲ್ಲಿ ಹಲವು ವಿದ್ಯಾರ್ಥಿಗಳು ವಿದ್ಯಾರ್ಥಿ ಜನತಾದಳಕ್ಕೆ ಸೇರ್ಪಡೆಯಾಗಿ ಸಂಘಟನೆಯ ಬಲವರ್ಧನೆಗೆ ಕೈಜೋಡಿಸಿದರು. ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಸಂಘಟನೆಯ ಮೌಲ್ಯಗಳು ಮತ್ತು ಕಾರ್ಯಪದ್ಧತಿಗಳ ಕುರಿತು ತಿಳುವಳಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿದ್ಯಾರ್ಥಿ ಜನತಾದಳ ಅದ್ಯಕ್ಷ ನಿಹಾಲ್ ಎಸ್. ಕೋಡ್ತುಗುಳಿ ಮತ್ತು ಜೆಡಿಎಸ್ ಮುಖಂಡ ಯೋಗಿಶ್ ಶೆಟ್ಟಿ ಜಪ್ಪು ರವರುಗಳು ಮಾತನಾಡಿ, ವಿದ್ಯಾರ್ಥಿ ಜನತಾದಳದ ಮಹತ್ವವನ್ನು ವಿವರಿಸಿದರು. ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಹಾಗೂ ಯುವಜನರ ಅಭಿವೃದ್ಧಿಗಾಗಿ ಜಾರಿಗೊಂಡ ವಿವಿಧ ಯೋಜನೆಗಳನ್ನು ಸ್ಮರಿಸಿ, ಯುವಕರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅಗತ್ಯತೆಯನ್ನು ಒತ್ತಿಹೇಳಿದರು. ಸಮಾಜದ ಬದಲಾವಣೆಗೆ ಯುವಜನರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ವಿದ್ಯಾರ್ಥಿ ಜನತಾದಳವು ಅದಕ್ಕಾಗಿ ಒಂದು ಶಕ್ತಿಯುತ ವೇದಿಕೆಯಾಗಿದೆ ಎಂದರು.
ಸಭೆಯಲ್ಲಿ ಶಶಾಂಕ್, ಪ್ರತೀಕ್, ಪ್ರನಾಮ್, ಶಶಾಂಕ್ ಮಲ್ಯ, ಶ್ರೇಹಸ್ ಕುಕ್ಕಜೆ, ಅಂಜನ್ ಮೂರ್ಜೆ, ಆದಿ ಭಂಡಾರಿ, ಚೆನ್ನ ಬಸವ, ಆದಿತ್ಯ ವಿನಯ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಲು ಕೈಜೋಡಿಸಿದರು.
ಒಟ್ಟಾರೆ, ಈ ಸಭೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿ ಜನತಾದಳದ ಸಂಘಟನೆಗೆ ಹೊಸ ಚೈತನ್ಯ ತುಂಬುವ ಪ್ರಯತ್ನ ನಡೆಯಿತು ಎಂದು ಹೇಳಬಹುದು.


