ಉಡುಪಿ : ಘನ ಮೋಹನ್ ಸಿ. ಲಾಝರಸ್ ಅವರ ನೇತೃತ್ವದಲ್ಲಿ ಮಾರ್ಚ್ 20ರಿಂದ 22ರವರೆಗೆ ಉಡುಪಿಯ ಮಿಷನ್ ಕಾಂಪೌಂಡ್ನಲ್ಲಿ ನಡೆಯಲಿರುವ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮಕ್ಕೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿದೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ತಿಳಿಸಿದ್ದಾರೆ.
ಫೆಲೋಶಿಪ್ ಆಫ್ ಉಡುಪಿ ಚರ್ಚಸ್ ವತಿಯಿಂದ ಮೂರು ದಿನಗಳ ಈ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಕಳೆದ ಐದಾರು ತಿಂಗಳುಗಳಿಂದ ಇದರಿಗಾಗಿ ಸಮಗ್ರ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪ್ರಮುಖ ಪ್ರವಚನಕಾರರಾಗಿ ಘನ ಮೋಹನ್ ಸಿ. ಲಾಝರಸ್ ಭಾಗವಹಿಸಲಿದ್ದು, ಅವರು ಇದಕ್ಕೂ ಮೊದಲು ಎರಡು ಬಾರಿ ಉಡುಪಿಗೆ ಭೇಟಿ ನೀಡಿ ಪ್ರವಚನಗಳನ್ನು ನೀಡಿದ್ದರು.
ಪ್ರಸ್ತುತ ಕ್ರೈಸ್ತ ಸಮುದಾಯಕ್ಕೆ ತಪಸ್ಸಿನ ಕಾಲವಾಗಿರುವ ಹಿನ್ನೆಲೆಯಲ್ಲಿ ಭಕ್ತಿ ಸಂಜೀವನ ಕೂಟಗಳನ್ನು ಆಯೋಜಿಸುವ ಪರಂಪರೆಯ ಭಾಗವಾಗಿ ಈ ಮಹೋತ್ಸವವನ್ನು ರೂಪಿಸಲಾಗಿದೆ. ಕಾರ್ಯಕ್ರಮದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸುಮಾರು 20 ದಿನಗಳ ಮುಂಚೆಯೇ ಮಾಹಿತಿ ನೀಡಲಾಗಿತ್ತು. ಆದರೆ ಕೆಲವು ಸಂಘಟನೆಗಳಿಂದ ಕಾರ್ಯಕ್ರಮವನ್ನು ನಡೆಸಲು ಬಿಡುವುದಿಲ್ಲ ಎಂಬ ಬೆದರಿಕೆಗಳು ಮಾಧ್ಯಮಗಳ ಮೂಲಕ ವ್ಯಕ್ತವಾಗಿದ್ದವು.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯವರನ್ನು ಸಂಪರ್ಕಿಸಿದಾಗ ಸಂದೇಶ ನೀಡುವ ವ್ಯಕ್ತಿಯನ್ನು ಬದಲಾಯಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಈಗಾಗಲೇ ಪೂರ್ಣ ಸಿದ್ಧತೆಗಳು ನಡೆದಿರುವ ಕಾರಣ ಯಾವುದೇ ಅಡಚಣೆ ಉಂಟಾಗದಂತೆ ಮಾಡಲು ಸಂಘಟಕರು ಮಾನ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯವು ಎರಡೂ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡಿದ್ದು, ಮೂಲಭೂತ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಅಗತ್ಯ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದೆ.
ನ್ಯಾಯಾಲಯದ ಆದೇಶದಂತೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆ. ಸಾರ್ವಜನಿಕರು ಗಾಳಿಸುದ್ದಿಗಳಿಗೆ ಕಿವಿಗೊಡದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಶಾಂತ್ ಜತ್ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

