ಉಡುಪಿ : ದಿನಾಂಕ 19-03-2026 ಗುರುವಾರ ಸಾಯಂಕಾಲ ಅಸ್ತಮಿಸಿದ ಬಳಿಕ, ಶುಕ್ರವಾರ ರಾತ್ರಿ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದರಂತೆ, ದಿನಾಂಕ 20-03-2026 ಶುಕ್ರವಾರದಂದು ಶವ್ವಾಲ್ 1, ಅಂದರೆ ಈದುಲ್ ಫಿತ್ರ್ ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಆಚರಿಸಲಿದ್ದಾರೆ.
ರಂಜಾನ್ ತಿಂಗಳ ಪವಿತ್ರ ಉಪವಾಸ ಅವಧಿ ಮುಕ್ತಾಯಗೊಂಡು, ಶವ್ವಾಲ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಈದ್ ಹಬ್ಬವು ಆಚರಣೆಗೊಳ್ಳುತ್ತದೆ. ಇಸ್ಲಾಮಿಕ್ ಚಂದ್ರಮಾನ ಕ್ಯಾಲೆಂಡರ್ ಪ್ರಕಾರ, ರಂಜಾನ್ ತಿಂಗಳು ಚಂದ್ರದರ್ಶನದಿಂದ ಆರಂಭವಾಗಿ, ಶವ್ವಾಲ್ ತಿಂಗಳ ಚಂದ್ರದರ್ಶನದೊಂದಿಗೆ ಅಂತ್ಯಗೊಳ್ಳುತ್ತದೆ. ಹೀಗಾಗಿ, ಶವ್ವಾಲ್ ಮೊದಲ ದಿನವನ್ನು ‘ಈದುಲ್ ಫಿತ್ರ್’ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ.
ರಂಜಾನ್ ತಿಂಗಳಾದ್ಯಂತ ಮುಸ್ಲಿಮರು ಪ್ರಾರ್ಥನೆ, ಉಪವಾಸ, ಧಾರ್ಮಿಕ ಚಿಂತನೆ ಹಾಗೂ ದಾನಧರ್ಮಗಳಲ್ಲಿ ತೊಡಗಿ ಆತ್ಮಶುದ್ಧಿಯನ್ನು ಸಾಧಿಸುತ್ತಾರೆ. ಈ 30 ದಿನಗಳ ಉಪವಾಸದ ಬಳಿಕ ಬರುವ ಈದುಲ್ ಫಿತ್ರ್ ಹಬ್ಬವು ಸಂತೋಷ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ.
ಹಬ್ಬದ ದಿನ ಮುಂಜಾನೆ ಮಸೀದಿಗಳಲ್ಲಿಯೂ ಹಾಗೂ ಈದ್ಗಾಗಳಲ್ಲಿಯೂ ವಿಶೇಷ ಈದ್ ನಮಾಜ್ ನಡೆಯುತ್ತದೆ. ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳೊಂದಿಗೆ ದೇವನ ಮಹಿಮೆ ಸ್ಮರಿಸಲ್ಪಡುತ್ತದೆ. ಈ ಪವಿತ್ರ ಪ್ರಾರ್ಥನೆಯ ವೇಳೆ ಬಡವ-ಶ್ರೀಮಂತ ಎಂಬ ಭೇದವಿಲ್ಲದೆ, ಜಾತಿ-ಪಂಥಗಳ ಬೇಧವಿಲ್ಲದೆ ಎಲ್ಲರೂ ಒಂದೇ ಸಾಲಿನಲ್ಲಿ ನಿಂತು ನಮಾಜ್ ಸಲ್ಲಿಸುವುದು ಇಸ್ಲಾಂ ಧರ್ಮ ಸಾರುವ ಸಮಾನತೆ ಮತ್ತು ಸಹೋದರತ್ವದ ಮಹತ್ವವನ್ನು ಪ್ರತಿಬಿಂಬಿಸುತ್ತದೆ.
ಇದೇ ವೇಳೆ, ಈದ್ ಹಬ್ಬದ ಅಂಗವಾಗಿ ಪರಸ್ಪರ ಶುಭಾಶಯ ವಿನಿಮಯ, ದಾನಧರ್ಮ (ಜಕಾತ್ ಅಲ್ ಫಿತ್ರ್), ಬಂಧು-ಬಳಗ ಭೇಟಿ, ವಿಶೇಷ ಊಟ-ವಿನೋದ ಕಾರ್ಯಕ್ರಮಗಳು ನಡೆಯುತ್ತವೆ. ಸಮಾಜದಲ್ಲಿ ಪ್ರೀತಿ, ಸಹಾನುಭೂತಿ ಮತ್ತು ಸಹಬಾಳ್ವೆ ಹೆಚ್ಚಿಸುವ ಹಬ್ಬವಾಗಿ ಈದುಲ್ ಫಿತ್ರ್ ಮಹತ್ವ ಪಡೆದುಕೊಂಡಿದೆ.
ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ಹಬ್ಬದ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದು, ಮುಸ್ಲಿಂ ಸಮುದಾಯವು ನಾಳೆಯ ಹಬ್ಬವನ್ನು ಆತ್ಮೀಯವಾಗಿ ಆಚರಿಸಲು ಸಜ್ಜಾಗಿದೆ.







