ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಹಾಗೂ ಸುತ್ತಮುತ್ತಲಿನ ಗ್ರಾಮ ಪ್ರದೇಶಗಳಲ್ಲಿ ಇತ್ತೀಚೆಗೆ ಚಿರತೆಗಳ ಸಂಚರಣೆ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ವೇಳೆಯಲ್ಲಿ ವಾಸಸ್ಥಾನಗಳ ಹತ್ತಿರ ಚಿರತೆ ಕಾಣಿಸಿಕೊಂಡಿರುವ ಘಟನೆಗಳು ವರದಿಯಾಗಿದ್ದು,ಇತ್ತಿಚಿನ ದಿನಗಳಲ್ಲಿ ಇನ್ನಂಜೆ ಪಾಂಗಳ ಮಂಡೆಡಿ ಪರಿಸರದಲ್ಲಿ ದಿನನಿತ್ಯ ಸಾಕುಪ್ರಾಣಿ ನಾಯಿಗಳನ್ನು ಮನೆ ಅವರಣದಿಂದ ದಾಳಿ ಮಾಡಿ ಕೊಂಡೊಯಿದ್ದರು ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳದಿರುವುದು ಸ್ಥಳೀಯರು ತುಳುನಾಡ ರಕ್ಷಣಾ ವೇದಿಕೆ ಗಮನಕ್ಕೆ ತಂದಿರುತ್ತಾರೆ.
ಈ ಹಿನ್ನೆಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರು ಅರಣ್ಯ ಇಲಾಖೆಯ ತುರ್ತು ಹಸ್ತಕ್ಷೇಪಕ್ಕೆ ಆಗ್ರಹಿಸಿದ್ದಾರೆ. ಜನವಸತಿ ಪ್ರದೇಶಗಳ ಸಮೀಪ ಚಿರತೆಗಳ ಓಡಾಟ ಹೆಚ್ಚುತ್ತಿರುವುದು ಗ್ರಾಮಸ್ಥರ ಸುರಕ್ಷತೆಗೆ ಗಂಭೀರ ಸವಾಲಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಮುಖ್ಯ ಆಗ್ರಹಗಳು:
1. ಚಿರತೆ ಸಂಚರಿಸುತ್ತಿರುವ ಪ್ರದೇಶಗಳಲ್ಲಿ ತಕ್ಷಣ ಬೋನುಗಳನ್ನು, ಕೇಜ್ಗಳನ್ನು ಅಳವಡಿಸಿ ಹಿಡಿಯುವ ಕ್ರಮ ಕೈಗೊಳ್ಳಬೇಕು.
2. ರಾತ್ರಿ ವೇಳೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ನಿರಂತರ ಪಹರೆ ವ್ಯವಸ್ಥೆ ಮಾಡಬೇಕು.
3. ಗ್ರಾಮಸ್ಥರಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ತಿಳಿಸುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
4. ಸಾಕುಪ್ರಾಣಿಗಳ ಮೇಲೆ ದಾಳಿ ನಡೆದಿದ್ದಲ್ಲಿ ತಕ್ಷಣ ಪರಿಹಾರಧನ ಮಂಜೂರು ಮಾಡಬೇಕು.
5. ಸಿಸಿಟಿವಿ ಕ್ಯಾಮೆರಾ ಹಾಗೂ ಅಲಾರಂ ವ್ಯವಸ್ಥೆ ಅಳವಡಿಕೆಗೆ ಸರ್ಕಾರದಿಂದ ನೆರವು ಒದಗಿಸಬೇಕು.
ಗ್ರಾಮಸ್ಥರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದು, ಮಕ್ಕಳು ಹಾಗೂ ಹಿರಿಯರು ಮನೆ ಹೊರಗೆ ಹೋಗಲು ಭಯಪಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳ ಸುರಕ್ಷತೆಗೂ ಇದು ದೊಡ್ಡ ಪ್ರಶ್ನೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸಮಗ್ರ ಕಾರ್ಯಯೋಜನೆ ರೂಪಿಸಬೇಕು ಎಂದು ಫ್ರ್ಯಾಂಕಿ ಡಿಸೋಜ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಹಾಗೂ ಜಿಲ್ಲಾ ಆಡಳಿತ ತಕ್ಷಣ ಸ್ಪಂದಿಸಿ ಚಿರತೆ ಹಾವಳಿಯನ್ನು ನಿಯಂತ್ರಿಸುವ ಮೂಲಕ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಪ್ರಕಟಣೆಯಲ್ಲಿ ಆಗ್ರಹಿಸಿದೆ.

