ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿರುವ ಫಿಶ್ ಮೀಲ್ ಘಟಕದ ವಿರುದ್ಧ ಗ್ರಾಮಸ್ಥರ ಆಕ್ರೋಶ ತಾರಕಕ್ಕೇರಿದೆ. ಪರಿಸರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ ಈ ಘಟಕವನ್ನು ತಕ್ಷಣವೇ ಕೈಬಿಡುವಂತೆ ಒತ್ತಾಯಿಸಿ, ಫೆಬ್ರವರಿ 23 ಸೋಮವಾರ ಬೆಳಿಗ್ಗೆ ಪಳ್ಳಿ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಶಾಂತಿಯುತ ಧರಣಿ ಹಮ್ಮಿಕೊಳ್ಳಲಾಗಿದೆ.
ಈ ಹಿಂದೆ ಪಡುಬಿದ್ರೆ ಪ್ರದೇಶದಲ್ಲಿ ಸಾರ್ವಜನಿಕರ ತೀವ್ರ ವಿರೋಧಕ್ಕೆ ಗುರಿಯಾಗಿ ಸ್ಥಳಾಂತರಗೊಂಡಿದ್ದ ಫಿಶ್ ಮೀಲ್ ಘಟಕವೊಂದು ಇದೀಗ ಪಳ್ಳಿಯ ಶಾಂತ ಹಾಗೂ ಹಸಿರ್ಮಯ ವಾತಾವರಣಕ್ಕೆ ಬರುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮತ್ತು ಆಕ್ರೋಶ ಹುಟ್ಟಿಸಿದೆ. ಜನವಸತಿ ಪ್ರದೇಶದ ಸಮೀಪದಲ್ಲೇ ಇಂತಹ ಕೈಗಾರಿಕಾ ಘಟಕ ಸ್ಥಾಪನೆಯಾಗುತ್ತಿರುವುದು ಸ್ಥಳೀಯರ ಜೀವನಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಫಿಶ್ ಮೀಲ್ ಘಟಕದಿಂದ ಹೊರಬರುವ ಭಾರೀ ದುರ್ವಾಸನೆ ವಾತಾವರಣವನ್ನು ದುಷ್ಪರಿಣಾಮಗೊಳಿಸುವುದಲ್ಲದೆ, ತ್ಯಾಜ್ಯ ನೀರಿನ ನಿರ್ವಹಣೆ ಸರಿಯಾಗಿ ನಡೆಯದಿದ್ದರೆ ಅಂತರ್ಜಲ ಕಲುಷಿತವಾಗುವ ಭೀತಿ ಇದೆ. ಇದರಿಂದ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರ ಆರೋಗ್ಯಕ್ಕೂ ದೀರ್ಘಕಾಲಿಕ ಹಾನಿ ಸಂಭವಿಸಬಹುದೆಂಬ ಆತಂಕ ವ್ಯಕ್ತವಾಗಿದೆ. ಕೃಷಿ, ಕುಡಿಯುವ ನೀರು ಹಾಗೂ ಪರಿಸರ ಸಮತೋಲನದ ಮೇಲೆಯೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯನ್ನು ಗ್ರಾಮಸ್ಥರು ಉಲ್ಲೇಖಿಸಿದ್ದಾರೆ.
ಗ್ರಾಮದ ಅಸ್ತಿತ್ವ, ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ಪೀಳಿಗೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಕ್ಷಾತೀತವಾಗಿ ಹಿರಿಯರು, ಯುವಕರು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಒಂದಾಗಿ ಈ ಪ್ರತಿಭಟನೆಗೆ ಮುಂದಾಗಿದ್ದಾರೆ. ಸೋಮವಾರ ನಡೆಯುವ ಧರಣಿ ಶಾಂತಿಯುತವಾಗಿದ್ದು, “ನಮ್ಮ ಗ್ರಾಮದ ಜನವಸತಿ ಪ್ರದೇಶದಲ್ಲಿ ಇಂತಹ ಮಾಲಿನ್ಯಕಾರಕ ಘಟಕಗಳಿಗೆ ಅವಕಾಶ ನೀಡಬಾರದು” ಎಂಬ ಸ್ಪಷ್ಟ ಮನವಿಯನ್ನು ಪಂಚಾಯತ್ ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ.
ಗ್ರಾಮಸ್ಥರ ಒಗ್ಗಟ್ಟಿನ ಧ್ವನಿಯನ್ನು ಆಡಳಿತ ವ್ಯವಸ್ಥೆಗೆ ತಲುಪಿಸಿ, ಯೋಜನೆಯನ್ನು ಮರುಪರಿಶೀಲನೆಗೊಳಪಡಿಸಲು ಹಾಗೂ ಪರಿಸರ ಹಾನಿ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತದೆ ಎಂದು ಪ್ರತಿಭಟನೆ ಆಯೋಜಕರು ತಿಳಿಸಿದ್ದಾರೆ.
ಈ ಮಹತ್ವದ ಹೋರಾಟದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಹಕ್ಕು ಮತ್ತು ಪರಿಸರ ರಕ್ಷಣೆಗೆ ಧ್ವನಿಯಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.




