ಬೆಂಗಳೂರು:
ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ ಎಫ್ಐಆರ್ ದಾಖಲಿಸುವುದು ಹಾಗೂ ಬಂಧನಗಳ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಮ್, ಈ ಕುರಿತಾಗಿ ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.
ಫೆಬ್ರವರಿ 7ರಂದು ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಸುತ್ತೋಲೆ ಹೊರಡಿಸಲ್ಪಟ್ಟಿದ್ದು, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಮಾರ್ಚ್ 28, 2025ರಂದು ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನಗಳ ಅನುಸರಣೆಯೂ ಈ ಮಾರ್ಗಸೂಚಿಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಗೆ ಸಂಬಂಧಿಸಿದ ಯಾವುದೇ ದೂರು ಅಥವಾ ಮಾಹಿತಿ ಬಂದಾಗ, ತಕ್ಷಣ ಎಫ್ಐಆರ್ ದಾಖಲಿಸುವ ಬದಲು ಮೊದಲು ಪ್ರಾಥಮಿಕ ವಿಚಾರಣೆ ನಡೆಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಾನಹಾನಿ ಸೇರಿದಂತೆ ಇತರ ಸಮಾನ ಪ್ರಕರಣಗಳಲ್ಲಿ, ದೂರು ನೀಡುವವರು ಕಾನೂನಿನ ಪ್ರಕಾರ ನೇರವಾಗಿ ‘ನೊಂದ ವ್ಯಕ್ತಿ’ ಆಗಿರಬೇಕು ಎಂದು ಸೂಚಿಸಲಾಗಿದೆ.
ಗಂಭೀರ ಅಪರಾಧಗಳನ್ನು ಹೊರತುಪಡಿಸಿ, ಸಂಬಂಧವಿಲ್ಲದ ಮೂರನೇ ವ್ಯಕ್ತಿಗಳು ನೀಡುವ ದೂರುಗಳನ್ನು ಸ್ವೀಕರಿಸಬಾರದು. ದೂರಿನಲ್ಲಿ ಉಲ್ಲೇಖಿಸಿರುವ ವಿಷಯ ಮೇಲ್ನೋಟಕ್ಕೆ ಅಪರಾಧವಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಎಫ್ಐಆರ್ ದಾಖಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ದ್ವೇಷ ಭಾಷಣ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಅಥವಾ ದೇಶದ್ರೋಹದಂತಹ ಆರೋಪಗಳಿದ್ದರೂ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಸ್ಪಷ್ಟ ಹಾಗೂ ನಂಬಬಹುದಾದ ಸಾಕ್ಷ್ಯಗಳಿದ್ದರೆ ಮಾತ್ರ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಲಾಗಿದೆ. ಈ ಸಂದರ್ಭಗಳಲ್ಲಿ ಕೇದಾರನಾಥ್ ಸಿಂಗ್ ಹಾಗೂ ಶ್ರೇಯಾ ಸಿಂಘಾಲ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನು ಪರಿಗಣಿಸುವುದು ಕಡ್ಡಾಯವಾಗಿದೆ.
ಕಟುವಾದ ಅಥವಾ ಆಕ್ಷೇಪಾರ್ಹ ರಾಜಕೀಯ ಭಾಷಣಗಳು ಅಥವಾ ಪೋಸ್ಟ್ಗಳಿಗೆ ಯಾಂತ್ರಿಕವಾಗಿ ಪ್ರಕರಣ ದಾಖಲಿಸಬಾರದು. ಸಂವಿಧಾನದ 19(1)(ಎ) ಅಡಿಯಲ್ಲಿ ದೊರಕಿರುವ ವಾಕ್ ಸ್ವಾತಂತ್ರ್ಯವನ್ನು ಗೌರವಿಸಬೇಕು. ಪೋಸ್ಟ್ನಿಂದ ಸಾರ್ವಜನಿಕ ಶಾಂತಿಗೆ ತಕ್ಷಣದ ಮತ್ತು ಗಂಭೀರ ಅಪಾಯ ಉಂಟಾದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಅದೇ ರೀತಿ, ಸುಪ್ರೀಂ ಕೋರ್ಟ್ನ ಅರ್ನೇಶ್ ಕುಮಾರ್ ಪ್ರಕರಣದ ಮಾರ್ಗಸೂಚಿಗಳಂತೆ, ಅನಗತ್ಯವಾಗಿ ಅಥವಾ ಯಾಂತ್ರಿಕವಾಗಿ ಯಾರನ್ನೂ ಬಂಧಿಸಬಾರದು ಎಂದು ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.






