ಉಡುಪಿ ಸಾಸ್ತಾನ ಟೋಲ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಗೆ ದೂರು

ಬ್ರಹ್ಮಾವರ, ಉಡುಪಿ | ಜನವರಿ 27, 2026:
ಸಾಸ್ತಾನ ಟೋಲ್ ಗೇಟ್ನಲ್ಲಿ ನಿವೃತ್ತ ಯೋಧರೊಂದಿಗೆ ಟೋಲ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಟೋಲ್ ವಿನಾಯಿತಿ ಪತ್ರವನ್ನು ತೋರಿಸಿದರೂ ಸಹ ಬಲವಂತವಾಗಿ ಶುಲ್ಕ ವಸೂಲು ಮಾಡಲು ಮುಂದಾದ ಸಿಬ್ಬಂದಿಯ ನಡೆ, ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರಿಗೆ ಮಾಡಿದ ಘೋರ ಅವಮಾನವೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಖಂಡಿಸಿದೆ.
ಯೋಧರು ದೇಶದ ಘನತೆ ಮತ್ತು ಗೌರವದ ಪ್ರತೀಕವಾಗಿದ್ದು, ಅವರೊಂದಿಗೆ ಈ ರೀತಿಯ ಅವಹೇಳನಕಾರಿ ವರ್ತನೆ ತೋರುವುದು ಕ್ಷಮಾರ್ಹವಲ್ಲ. ಟೋಲ್ ಸಿಬ್ಬಂದಿಗೆ ಸಾರ್ವಜನಿಕರೊಂದಿಗೆ, ವಿಶೇಷವಾಗಿ ಗೌರವಾನ್ವಿತ ಸೈನಿಕರೊಂದಿಗೆ ಹೇಗೆ ಸಂಯಮಿತ ಹಾಗೂ ಗೌರವಪೂರ್ಣವಾಗಿ ನಡೆದುಕೊಳ್ಳಬೇಕು ಎಂಬ ಕನಿಷ್ಠ ಅರಿವು ಇಲ್ಲದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಧಿಕೃತ ಮನವಿ ಸಲ್ಲಿಸಲಾಗಿದ್ದು, ಸಂಬಂಧಿಸಿದ ಟೋಲ್ ಸಿಬ್ಬಂದಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಟೋಲ್ ಸಿಬ್ಬಂದಿಗೆ ಸೂಕ್ತ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಗೌರವಾಧ್ಯಕ್ಷ ಅನ್ಸರ್ ಅಹ್ಮದ್, ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಸೇರಿಗಾರ್ತಿ, ಉಪಾಧ್ಯಕ್ಷೆ ದೇವಕಿ ಬಾರ್ಕೂರು, ಜಯಪ್ರಕಾಶ್ ಶೆಟ್ಟಿ, ನಾಗರಾಜ್, ಸಿದ್ದಣ್ಣ ಎಸ್. ಪೂಜಾರಿ, ಸವಿತಾ, ಆಶಾ, ಅನುಷ ಪಳ್ಳಿ, ಆನಂದ್ ಶೆಟ್ಟಿ, ಶಬೀರ್, ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


