ಮಂಗಳೂರು: ರಾಜ್ಯದ ಕಾರಾಗೃಹ ವ್ಯವಸ್ಥೆಯ ಮೇಲ್ವಿಚಾರಣೆಯ ಭಾಗವಾಗಿ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು ಮಂಗಳೂರು ಸೂಕ್ಷ್ಮ ಕಾರಾಗೃಹಕ್ಕೆ ಔಪಚಾರಿಕವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಒಟ್ಟು 54 ಕಾರಾಗೃಹಗಳಿದ್ದು, ಅವುಗಳನ್ನು ಸಮಯಕ್ಕೆ ಸರಿಯಾಗಿ ಪರಿಶೀಲಿಸುವುದು ಅಗತ್ಯವಿದೆ ಎಂದು ಅವರು ಹೇಳಿದರು.

ಮಂಗಳೂರು ಕಾರಾಗೃಹವನ್ನು ‘ಸೂಕ್ಷ್ಮ’ ಎಂದು ಗುರುತಿಸಿದ ಡಿಜಿಪಿ, ಈಗಾಗಲೇ ಇಲ್ಲಿ ವಿವಿಧ ರೈಡ್ಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು. ಒಳಗಡೆ ಗಲಾಟೆ ಸೃಷ್ಟಿಸಿದ ಖೈದಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದ್ದು, ಇನ್ನೂ ಕೆಲವರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯಲಿದೆ ಎಂದರು. ಉತ್ತಮ ನಡತೆ ಹೊಂದಿರುವ ಖೈದಿಗಳಿಗೆ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಕಾರಾಗೃಹದೊಳಗೆ ನಿಷೇಧಿತ ವಸ್ತುಗಳ ಪ್ರವೇಶವನ್ನು ತಡೆಗಟ್ಟುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದ್ದು, ಯಾವ ರೀತಿಯಲ್ಲಿ ಅಕ್ರಮ ವಸ್ತುಗಳು ಒಳಗೆ ಬರುತ್ತಿವೆ ಎಂಬುದರ ಕುರಿತು ಸಮಗ್ರ ಪರಿಶೀಲನೆ ನಡೆಯುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ಟ್ರಯಲ್ ಬೇಸಿಸ್ನಲ್ಲಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದರ ಪರಿಣಾಮಕಾರಿತ್ವವನ್ನು ಅವಲೋಕಿಸಿ ಮುಂದಿನ ಹಂತದಲ್ಲಿ ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು.
ಪರಪ್ಪನ ಅಗ್ರಹಾರ ಮತ್ತು ಮೈಸೂರು ಕೇಂದ್ರ ಕಾರಾಗೃಹಗಳಲ್ಲಿ ಈಗಾಗಲೇ ಎಐ ತಂತ್ರಜ್ಞಾನ ಟ್ರಯಲ್ ನಡೆದಿದ್ದು, ಅಗತ್ಯವಿದ್ದರೆ ಮಂಗಳೂರು ಜೈಲಿನಲ್ಲಿಯೂ ಪ್ರಯೋಗ ನಡೆಸಲಾಗುತ್ತದೆ ಎಂದು ಡಿಜಿಪಿ ತಿಳಿಸಿದರು. ಜಾಮರ್ ಸಮಸ್ಯೆ ಬಗ್ಗೆ ಕಳೆದ 15 ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು, ಕಾಲಾನುಸಾರ ಬದಲಾವಣೆಗಳಾದರೂ ಇನ್ನೂ ಕೆಲವು ತಾಂತ್ರಿಕ ಅಡಚಣೆಗಳು ಉಳಿದಿವೆ ಎಂದರು.
ನಿನ್ನೆ ಮಂಗಳೂರು ಜೈಲಿನೊಳಗೆ ಒಂದು ಮೊಬೈಲ್ ಫೋನ್ ಪತ್ತೆಯಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಮುಂದಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳೂ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು. ಜೈಲು ವ್ಯವಸ್ಥೆಯನ್ನು ಸಮರ್ಪಕವಾಗಿ ನಿಯಂತ್ರಿಸಿದರೆ 60 ಶೇಕಡಾ ಕಾನೂನು-ಸುವ್ಯವಸ್ಥೆ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಗಂಭೀರ ಪ್ರಕರಣಗಳ ಆರೋಪಿಗಳು ಜೈಲಿಗೆ ಬಂದು ಜಾಮೀನಿನ ಮೇಲೆ ಹೊರಗೆ ಹೋಗುತ್ತಾರೆ. ಈ ಮಧ್ಯಂತರ ಅವಧಿಯಲ್ಲಿ ಜೈಲಿನೊಳಗಿನ ನಿಯಂತ್ರಣ ಅತ್ಯಂತ ಮಹತ್ವದ್ದಾಗಿದೆ ಎಂದು ಡಿಜಿಪಿ ಅಲೋಕ್ ಕುಮಾರ್ ಹೇಳಿದರು.



