ಎಂ.ಆರ್.ಜಿ. ಗ್ರೂಪ್ನ ಆಶಾ–ಪ್ರಕಾಶ್ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಸಮಾಜಮುಖಿ ಯೋಜನೆ ‘ನೆರವು–2025’ ಡಿಸೆಂಬರ್ 25ರಂದು ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸುಮಾರು 4,000 ಕುಟುಂಬಗಳು ಹಾಗೂ 100ಕ್ಕೂ ಅಧಿಕ ಸಂಘ–ಸಂಸ್ಥೆಗಳಿಗೆ ಒಟ್ಟು ₹9.5 ಕೋಟಿ ಮೊತ್ತದ ನೆರವು ವಿತರಿಸಲಾಗಲಿದೆ ಎಂದು ಎಂ.ಆರ್.ಜಿ. ಗ್ರೂಪ್ನ ಚೇರ್ಮನ್ ಡಾ. ಪ್ರಕಾಶ್ ಶೆಟ್ಟಿ ಪ್ರಕಟಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರವು’ ಯೋಜನೆ ಈ ವರ್ಷ ಏಳನೇ ವರ್ಷಕ್ಕೆ ಕಾಲಿಟ್ಟಿದ್ದು, ಮುಂದಿನ ಮೂರು ವರ್ಷಗಳ ಕಾಲ ಮುಂದುವರಿಯಲಿದೆ ಎಂದು ತಿಳಿಸಿದರು. ದಶಮಾನೋತ್ಸವದ ನಂತರ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಯೋಜನೆಗೆ ಸಾಮೂಹಿಕ ಸ್ವರೂಪ ನೀಡುವ ಚಿಂತನೆ ಇದೆ. ಈ ವಿಸ್ತರಣೆಯಿಂದ ಮುಂದಿನ ದಿನಗಳಲ್ಲಿ ಪ್ರತಿವರ್ಷ ಕನಿಷ್ಠ 14,000 ಕುಟುಂಬಗಳಿಗೆ ನೆರವು ನೀಡುವ ಸಾಧ್ಯತೆ ಇದೆ ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ವೈದ್ಯಕೀಯ ಚಿಕಿತ್ಸೆ ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿಲ್ಲ ಎಂಬ ವಾಸ್ತವವನ್ನು ಉಲ್ಲೇಖಿಸಿದ ಡಾ. ಶೆಟ್ಟಿ, ಈ ಬಾರಿ ನೆರವಿನ ಮೊತ್ತದ ಗಣನೀಯ ಭಾಗವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗಿದೆ ಎಂದರು. ಇದು ಆಧುನಿಕ ಚಿಕಿತ್ಸೆಯ ಪ್ರಜಾಪ್ರಭುತ್ವೀಕರಣದ ದಿಕ್ಕಿನಲ್ಲಿನ ಪ್ರಾಮಾಣಿಕ ಪ್ರಯತ್ನ ಎಂದು ಅವರು ಅಭಿಪ್ರಾಯಪಟ್ಟರು.
ಜಾತಿ, ಧರ್ಮ, ಪಂಗಡದಂತಹ ಯಾವುದೇ ಮಾನವ ನಿರ್ಮಿತ ಗಡಿಗಳಿಲ್ಲದೆ ಅವಶ್ಯಕತೆಯೇ ಫಲಾನುಭವಿಗಳ ಆಯ್ಕೆಯ ಏಕೈಕ ಮಾನದಂಡವಾಗಿದ್ದು, ಅರ್ಜಿಗಳನ್ನು ಸ್ವಾಯತ್ತ ಸಮಿತಿ ಪರಿಶೀಲಿಸಿ ಆಯ್ಕೆ ಮಾಡಿದೆ ಎಂದು ಹೇಳಿದರು. ದಿವ್ಯಾಂಗರು, ಡಯಾಲಿಸಿಸ್ ಸೇರಿದಂತೆ ನಿರಂತರ ಚಿಕಿತ್ಸೆ ಅಗತ್ಯವಿರುವವರು, ಶಿಕ್ಷಣ ನೆರವು ಬೇಕಾದ ವಿದ್ಯಾರ್ಥಿಗಳು, ಸಿಂಗಲ್ ಪೇರೆಂಟ್ ಮಕ್ಕಳು, ಸಾಂಸ್ಕೃತಿಕ–ಶೈಕ್ಷಣಿಕ–ಕ್ರೀಡಾ ಕ್ಷೇತ್ರಗಳ ಸಾಧಕರು ನೆರವಿನ ಲಾಭ ಪಡೆಯಲಿದ್ದಾರೆ ಎಂದು ವಿವರಿಸಿದರು.
ಮನೆ ನಿರ್ಮಾಣ ಹಂತದಲ್ಲಿರುವ ಹಾಗೂ ಗೃಹಪ್ರವೇಶಕ್ಕಾಗಿ ಕಾಯುತ್ತಿರುವ ಕುಟುಂಬಗಳ ಭಾವನಾತ್ಮಕ ಮತ್ತು ಆರ್ಥಿಕ ಸ್ಥಿತಿಯನ್ನು ಮೌಲ್ಯಮಾಪನ ಮಾಡಿ ನೆರವು ನೀಡಲಾಗುತ್ತಿದೆ. ಮನೆ ಕಟ್ಟಲು ಸಹಾಯ ಕೋರಿದ ಅರ್ಜಿಗಳನ್ನೂ ಪುರಸ್ಕರಿಸಲಾಗಿದೆ ಎಂದರು.
ಯೋಜನೆಯ ಆರಂಭಿಕ ವರ್ಷದಲ್ಲಿ ₹1.25 ಕೋಟಿ ನೆರವು ವಿತರಿಸಲಾಗಿದ್ದು, 28 ಸಂಘ–ಸಂಸ್ಥೆಗಳು ಪ್ರಯೋಜನ ಪಡೆದಿದ್ದವು. ಈಗ ಏಳನೇ ವರ್ಷಕ್ಕೆ ಕಾಲಿಟ್ಟಿರುವ ಯೋಜನೆಯಲ್ಲಿ 100ಕ್ಕೂ ಅಧಿಕ ಸಂಘ–ಸಂಸ್ಥೆಗಳಿಗೆ ನೆರವು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಫಲಾನುಭವಿಗಳ ಆಯ್ಕೆಯಲ್ಲಿ ಪ್ರಾದೇಶಿಕತೆಯನ್ನೂ ಗಮನದಲ್ಲಿಟ್ಟುಕೊಂಡಿದ್ದು, ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮೂಡಬಿದ್ರೆಯ ಅಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ. ಗ್ರೂಪ್ನ ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಉಪಸ್ಥಿತರಿರಲಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸಲ್ಲಿಸಲಾಗುವುದು ಎಂದು ಡಾ. ಶೆಟ್ಟಿ ತಿಳಿಸಿದರು.


